ದೇಶದಲ್ಲಿ ಕುಗ್ಗಿದ ರಾಜ್ಯದ ಘನತೆ

ಬೆಂಗಳೂರು, ಮೇ ೧೯- ಕಾಂಗ್ರೆಸ್ ಆಡಳಿತದ ಪರಿಣಾಮ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಘನತೆ, ಪ್ರತಿಷ್ಠೆ ಕುಗ್ಗುತ್ತಿದೆ. ಸರ್ಕಾರದ ಬಹುತೇಕ ಇಲಾಖೆಗಳು ನಿಷ್ಕ್ರೀಯಗೊಂಡಿವೆ. ವೈದ್ಯಕೀಯ ಇಲಾಖೆಯ ಬದ್ಧತೆ ಇಲ್ಲದ ಕಾರ್ಯವೈಖರಿಯಿಂದ ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ರಾಜ್ಯ ಶೋಕಾಸ್ ನೋಟಿಸ್ ಪಡೆಯುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಯಾವುದೇ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಸಿಬ್ಬಂದಿ ನೇಮಕ ಮಾಡದೆ, ಉಪಕರಣ
ಗಳ ಖರೀದಿ ಮಾಡದೆ ಎಂಆರ್‌ಐ, ಸಿಟಿ ಸ್ಕ್ಯಾನ್, ರೆಡಿಯೋಲಾಜಿಸ್ಟ್‌ಗಳ ಸೇವೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿ ರಾಷ್ಟ್ರೀಯ ವೈದ್ಕಕೀಯ ಆಯೋಗ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸದೆ ಶೋಕಾಸ್ ನೋಟಿಸ್ ಮೂಲಕ ಛೀಮಾರಿ ಹಾಕಿಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.


ದಿನನಿತ್ಯವೂ ತನ್ನ ಬರಿದಾಗಿರುವ ಬೊಕ್ಕಸವನ್ನು ತುಂಬಿಸಿಕೊಳ್ಳಲು ದಿನಬಳಕೆ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮೂಲಕ ಜನ ಸಾಮಾನ್ಯರಿಗೆ ಬರೆ ಎಳೆಯುತ್ತಾ ಜನ ಸಾಮಾನ್ಯರಿಂದಲೂ ಛೀಮಾರಿ ಹಾಕಿಸಿಕೊಳ್ಳುತ್ತಿದ್ದ ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರ ಇದೀಗ ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ನೋಟಿಸ್ ಪಡೆಯುವಂತಾಗಿ ತನ್ನ ದುರಾಡಳಿತವನ್ನು ರಾಷ್ಟ್ರದೆದುರು ಅನಾವರಣ ಮಾಡಿಕೊಂಡಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.