ಸುಧಾಮೂರ್ತಿ ವಿರುದ್ಧ ಕುಚೋದ್ಯದ ಹೇಳಿಕೆ ಖಂಡನೀಯ

ಕೋಲಾರ,ಅ,೩೦- ಸಾಮಾಜಿಕ ಸಮೀಕ್ಷೆಗೆ ಸುಧಾಮೂರ್ತಿಯವರು ನೀಡಿದ ದತ್ತಾಂಶಗಳನ್ನು ಉಚ್ಚನ್ಯಾಯಾಲಯದ ಆದೇಶಕ್ಕೆ ವಿರುದ್ದವಾಗಿ ಸೋರಿಕೆ ಮಾಡಿದ್ದಲ್ಲದೇ ಅವರ ವಿರುದ್ದ ಕುಚೋದ್ಯದ ಮಾತುಗಳನ್ನಾಡಲು ಕಾರಣರಾದ ಅಧಿಕಾರಿಗಳ ಶಿಸ್ತು ಕ್ರಮ ಕೈಗೊಳ್ಳುವಂತೆ ಅಖಿಲ ಕರ್ನಾಟಕ ಶ್ರೀ ಮಾದ್ವ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಮೋಹನ್ ಆಗ್ರಹಿಸಿ, ಈ ಕುರಿತು ಪ್ರತಿಕ್ರಿಯೆ ನೀಡದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳ ಧೋರಣೆಯನ್ನೂ ಖಂಡಿಸಿದರು.


ಮುಳಬಾಗಿಲು ತಾಲೂಕಿನಲ್ಲಿರುವ ಶ್ರೀ ಶ್ರೀ ಶ್ರೀ ಶ್ರೀಪಾದರಾಜರ ಮಠ, ಕೋಲಾರಮ್ಮನ ದೇವಸ್ಥಾನ ಹಾಗೂ ಶಂಕರಮಠಕ್ಕೆ ಭೇಟಿ ನೀಡಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.


ಜಾತಿ,ಧರ್ಮ ಬೇಧವಿಲ್ಲದೇ ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಸುಧಾಮೂರ್ತಿ ಅವರು ರಾಜ್ಯ ಮತ್ತು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಸಾಮಾಜಿಕ ಸಮೀಕ್ಷೆಯ ನಂತರ ಕೆಲವರು ಸುಧಾಮೂರ್ತಿಯವರ ಕುರಿತು ಕುಚೋದ್ಯದ ಮಾತುಗಳನ್ನಾಡಿದ್ದು ಖಂಡನೀಯವಾಗಿದೆ ಮತ್ತು ಈ ಕುರಿತು ಅದರ ವಿರುದ್ದ ಪ್ರತಿಕ್ರಿಯೆ ನೀಡಲು ವಿಫಲವಾಗಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ್ ನಮ್ಮ ಸಮಾಜದ ಗಣ್ಯರ,ಉದ್ಯಮಿಗಳ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಮತ್ತು ಮಾದ್ವ ಬ್ರಾಹ್ಮಣರ ಕುರಿತ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.


ಮಹಾಸಭಾ ಅಧ್ಯಕ್ಷ ರಘುನಾಥ್ ವಿರುದ್ದ ಮಾತನಾಡಿದ ಅವರು, ಮಹಾಸಭಾಗೆ ೪೫೩ಪದಾಧಿಕಾರಿಗಳನ್ನು ನೇಮಿಸಿಕೊಳ್ಳುವ ಮೂಲಕ ಸಭಾದ ಉಪನಿಯಮಗಳನ್ನು ಉಲ್ಲಂಘಿಸಿದ್ದಾರೆ, ಇವರ ತಪ್ಪುಗಳನ್ನು ಪ್ರಶ್ನಿಸಿದ್ದಕ್ಕಾಗಿ ತುರ್ತು ಸಭೆ ಕರೆದು ಚರ್ಚಿಸಿ ನನ್ನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಮಾತುಗಳನ್ನಾಡಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.


ನಾನು ಕಳೆದ ಸುಮಾರು ೨೯ ವರ್ಷಗಳಿಂದ ಮಹಾಸಭೆಗೆ ದುಡಿದಿದ್ದು, ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯನಾಗಿ, ಜಂಟಿ ಕಾರ್ಯದರ್ಶಿಯಾಗಿ, ಸಂಘಟನಾ ಕಾರ್ಯದರ್ಶಿಯಾಗಿ ನಂತರ ಎರಡು ಬಾರಿ ಉಪಾಧ್ಯಕ್ಷನಾಗಿ ವಿವಿಧ ಅಧ್ಯಕ್ಷರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿರುತ್ತೇನೆ. ಶ್ರೀ ಎಸ್.ರಘುನಾಥ್‌ರವರ ಅಧ್ಯಕ್ಷತೆಯಲ್ಲಿ ಸುಮಾರು ನೂರು ದಿನಗಳ ಕಾಲ ಉಪಾಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿರುತ್ತೇನೆ ಎಂದರು.


ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ರವರು ದಿನಾಂಕ ರಹಿತ ತಮ್ಮ ಚುನಾವಣಾ ಕರಪತ್ರದಲ್ಲಿ ಮಹಾಸಭೆಯ ನಿಯಮಗಳಿಗೆ (ಬೈಲಾ) ಸಕಾರಾತ್ಮಕ ಬದಲಾವಣೆಗಳನ್ನು ತರುತ್ತೇನೆ ಎಂದು ತಿಳಿಸಿದ್ದರು. ನಾವು ಇವರ ಭರವಸೆಗಳನ್ನು ಕಂಡು ಇದೆಲ್ಲವನ್ನು ಜಾರಿಗೆ ತರಬಹುದು ಎಮಬ ಆಶಾಭಾವನೆ ಹೊಂದಿದ್ದೆವು. ಇವರ ಭರವಸೆಯೆಲ್ಲವೂ ಮರೀಚಿಕೆಯಾದ ನಂತರ ಮಹಾಸಭಾದ ಹಿತದೃಷ್ಟಿಯಿಂದ ಪ್ರಶ್ನೆ ಮಾಡಲು ಆರಂಭಿಸಿದ್ದೇ ನಾನು ಮಾಡಿದ ತಪ್ಪು ಎಂದರು.


ಪ್ರತಿ ಬ್ರಾಹ್ಮಣರು ಸದಸ್ಯರಾಗಬೇಕೆಂದು ಹೇಳುತ್ತಿದ್ದ ರಘುನಾಥ್ ಈಗ ತಟಸ್ಥರಾಗಿದ್ದಾರೆ, ಆದರೆ ಈ ಹಿಂದೆ ಸುಮಾರು ೭೭,೦೦೦ಕ್ಕೂ ಹೆಚ್ಚು ಸದಸ್ಯರಿದ್ದು ಅವರೆಲ್ಲರಿಗೂ ಸಹಾ ತಪ್ಪು ಸಂದೇಶವನ್ನು ನೀಡಿದ್ದು, ಈ ಹಿಂದಿನ ಅಧ್ಯಕ್ಷರು ಸುಮಾರು ೭೭,೦೦೦ಕ್ಕೂ ಹೆಚ್ಚು ಸದಸ್ಯರನ್ನು ನೋಂದಾಯಿಸಿ ಮಹಾಸಭೆಗೆ ಕೊಡುಗೆಯನ್ನು ನೀಡಿದ್ದಾರೆ ಎಂಬುದನ್ನೇ ಮರೆಮಾಚಿದ್ದಾರೆ ಎಂದು ಟೀಕಿಸಿದರು.