ಯಾದಗಿರಿ:ಆ:೨೩: ಮಳೆಗಾಲದ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಕಲುಷಿತ ನೀರು ಸಂಗ್ರಹವಾಗಿ ಸೊಳ್ಳೆ, ಡೆಂಗೂ ವೈರಾಣುಗಳು ಹುಟ್ಟಿ ಮಾನವ ದೇಹ ಹೊಕ್ಕು ಅನಾರೋಗ್ಯಕ್ಕೆ ಕಾರಣವಾಗುವಂತಹ ವಾತಾವರಣ ಈಗ ಇದ್ದು, ಜನರು ಎಚ್ಚರಿಕೆಯಿಂದ ಇದ್ದು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರಾದಾರ್ ಹೇಳಿದರು. ನಗರದ ಗಾಂಧಿ ವೃತ್ತದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು, ಜಿಲ್ಲಾ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಡೆಂಗೂ ಜ್ವರ ನಿಯಂತ್ರಣ ಮತ್ತು ಮುಂಜಾಗೃತ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಖ್ಯವಾಗಿ ಸೋಂಕಿತ ಈಡಿಸ್ ಸೊಳ್ಳೆಗಳು ಕಚ್ಚುವುದರಿಂದ ಇದು ಉಂಟಾಗುತ್ತದೆ. ಡೆಂಗ್ಯೂ ವೈರಸ್‌ಗಳನ್ನು ಮನುಷ್ಯರಿಗೆ ಹರಡುತ್ತವೆ. ವೈರಸ್ ದೇಹವನ್ನು ಪ್ರವೇಶಿಸಿದ ನಂತರ ಜ್ವರ, ತಲೆನೋವು ಮತ್ತು ಸ್ನಾಯು ನೋವಿನಂತಹ ಲಕ್ಷಣಗಳನ್ನು ಉಂಟುಮಾಡುತ್ತವೆ ಎಂದರು. ಈಡಿಸ್ ಈಜಿಪ್ಟಿ ಮತ್ತು ಈಡಿಸ್ ಅಲ್ಬೋಪಿಕ್ಟಸ್ ಎಂಬ ಹೆಣ್ಣು ಸೊಳ್ಳೆಗಳು ಡೆಂಗ್ಯೂವನ್ನು ಹರಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಡಾ.ಮಹೇಶ ಬಿರಾದಾರ ವಿವರಿಸಿದರು. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸಾಜಿದ್ ಮುದಸಿರ್ ಮಾತನಾಡಿ, ಡೆಂಗೂ ಸೋಂಕಿತ ಸೊಳ್ಳೆಯು ವ್ಯಕ್ತಿಯನ್ನು ಕಚ್ಚಿದಾಗ, ಡೆಂಗ್ಯೂ ವೈರಸ್ ರಕ್ತಪ್ರವಾಹದಲ್ಲಿ ಸೇರಿ ಯಕೃತ್ತು ಮತ್ತು ಇತರ ಅಂಗಗಳಿಗೆ ಹರಡುತ್ತದೆ.
ಡೆಂಗ್ಯೂ ವೈರಸ್‌ನ ನಾಲ್ಕು ವಿಭಿನ್ನ ಸಿರೊಟೈಪ್‌ಗಳಿವೆ. ಮೊದಲ ಸೋಂಕು ಒಂದು ನಿರ್ದಿಷ್ಟ ಸಿರೊಟೈಪ್‌ಗೆ ಜೀವಿತಾವಧಿಯ ಪ್ರತಿರಕ್ಷೆಯನ್ನು ನೀಡುತ್ತದೆ, ಆದರೆ ನಂತರದ ಸೋಂಕುಗಳು ತೀವ್ರ ರೋಗಲಕ್ಷಣಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂದರು. ಕಾರಣ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಪ್ರಥಮ ಹಂತ ಪರೀಕ್ಷೆಗಳನ್ನು ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ಡಾ.ಮುದಸಿರ್ ಹೇಳಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ. ಹಣಮಂತ ರೆಡ್ಡಿ, ವೈದ್ಯಾಧಿಕಾರಿ ಡಾ ಶೀತಿಸ್, ಡಾ. ವಿನಿತಾ, ಡಾ ನಗರಾಜ ಗೌಳಿ, ಪರಿಸರ ಅಭಿಯಂತರರಾದ ಪ್ರಶಾಂತ , ಆರೋಗ್ಯ ನಿರೀಕ್ಷಕರಾದ ಶರಣಮ್ಮ, ಸಿದ್ದಾರ್ಥ ಸೇರಿದಂತೆ ಶ್ರೀಹರಿ, ಪ್ಯಾರಾ ಮೇಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.
























