
ಯಾದಗಿರಿ: ಡಿ.೨೪:ರಾಜ್ಯ ಸರ್ಕಾರದ ದ್ವೇಷ ಭಾಷಣ ಮಸೂದೆಗೆ ಅಂಕಿತ ಹಾಕಬಾರದು ಎಂದು ಶಿವಸೇನಾ ಕರ್ನಾಟಕ (ಏಕನಾಥ ಶಿಂಧೆ ಬಣ) ಪ್ರತಿಭಟನೆ ನಡೆಸುವ ಮುಖಾಂತರ ರಾಜ್ಯಪಾಲರಿಗೆ ಒತ್ತಾಯಿಸಿ ಮನವಿ ಸಲ್ಲಿಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರದರ್ಶನ ನಡೆಸಿದ ಶಿವಸೈನಿಕರನ್ನುದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ವಿಜಯ ಪಾಟೀಲ್, ಕರ್ನಾಟಕ ಸರ್ಕಾರ ಪ್ರಸಕ್ತ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಯಾವುದೇ ವಿಸೃತ ಚರ್ಚೆ, ಮತ ವಿಭಜನೆ, ತಿದ್ದುಪಡಿ, ಸೇರ್ಪಡೆಗೆ ಅವಕಾಶವನ್ನೂ ನೀಡದೆ ತರಾತುರಿಯಲ್ಲಿ ದ್ವೇಷ ಭಾಷಣ ಮಸೂದೆ ಮಂಡಿಸಿದೆ. ಇದೊಂದು ಪ್ರಜಾಪ್ರಭುತ್ವ, ವಾಕ್ ಸ್ವತಂತ್ರದ ಕಗ್ಗೊಲೆಯ ಕರಾಳ ಮಸೂದೆಯಾಗಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ನಿರ್ಮಿಸುವ ಹುನ್ನಾರ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತಿಹಾಸದಲ್ಲಿ ನಡೆದ ಭಿಕರ, ವಾಸ್ತವ ಸತ್ಯಗಳನ್ನು ಸಮಾಜಕ್ಕೆ ತಿಳುಹಿಸಿದ್ರೆ, ನಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರೆ, ಸರ್ಕಾರದ ಜನ ವಿರೋಧಿ ನೀತಿ ಟೀಕಿಸಿದ್ರೆ ಮುಂತಾದ ಸಂದರ್ಭದಲ್ಲಿ ಕೇಸ್ ಹಾಕಿ ಸತ್ಯ ದಮನಿಸುವ ಷಡ್ಯಂತ್ರ ಈ ಕಾಯ್ದೆಯ ಹಿಂದೆ ಅಡಗಿದೆ ಎಂದು ಅವರು ಆರೋಪಿಸಿದರು.
ಈ ಕಾಯ್ದೆಯು ಸರ್ಕಾರಿ ಅಧಿಕಾರಿಗಳಿಗೆ ಮುಕ್ತ ಅವಕಾಶ ಕೊಟ್ಟು ವಿರೋಧ ಪಕ್ಷಗಳನ್ನು ಜನದನಿಯನ್ನು ಅಡಗಿಸುವ ದುರುದ್ದೇಶದ ದುರ್ಬಳಕೆಗೆ ಸರ್ಕಾರ ರಹದಾರಿಯಾಗಿಸಿಕೊಂಡಿದೆ ಎಂದು ಕಿಡಿಕಾರಿದರು.
ಇಂತಹ ಜನ ವಿರೋಧಿ, ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ,ವಾಕ್ ಸ್ವತಂತ್ರ ವಿರೋಧಿ, ಕಾನೂನು ವಿರೋಧಿ ಮಸೂದೆಗೆ ಸಹಿ ಹಾಕದೆ ಪ್ರಜಾಪ್ರಭುತ್ವ, ಡಾ. ಬಾಬಾಸಾಹೇಬರ ಸಂವಿಧಾನ ಮೌಲ್ಯಎತ್ತಿ ಹಿಡಿಯುವಂತೆ ರಾಜ್ಯಪಾಲರಿಗೆ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವಸೇನಾ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಚೆನ್ನಾರಡ್ಡಿಗೌಡ ಕೋಡಾಲ್, ಉಪಾಧ್ಯಕ್ಷ ಬಸನಗೌಡ ಕನ್ಯಾಕೌಳೂರು, ಪ್ರ. ಕಾರ್ಯದರ್ಶಿ ಶಶಾಂಕ ನಾಯಕ, ಯುವ ಘಟಕದ ಜಿಲ್ಲಾಧ್ಯಕ್ಷ ಸಂದೀಪ ಮಹೇಂದ್ರಕರ್, ಶಂಕರ ಸೋನಾರ, ಮಲ್ಲು ಪೂಜಾರಿ ಮುಂಡರಗಿ, ಮಲ್ಲು ಕಲಾಲ್ ಮುಂಡರಗಿ, ವಿಶ್ವಾ ಬಾಲಛೇಡ, ಶರಣು ಹಾಲಗೇರಿ, ರಾಮರಾವ್ ಕುಲಕರ್ಣಿ, ಸೇರಿದಂತೆ ಅನೇಕರು ಇದ್ದರು.

























