Home ಜಿಲ್ಲೆ ಕಲಬುರಗಿ ಅನಕ್ಷರಸ್ತ ಗೂಂಡಾ ರಾಜಕಾರಣಿಗಳಿಂದ ಪ್ರಜಾಪ್ರಭುತ್ವ ನಾಶ : ಎಸ್.ಶಂಕರ ಕೋಡ್ಲಾ

ಅನಕ್ಷರಸ್ತ ಗೂಂಡಾ ರಾಜಕಾರಣಿಗಳಿಂದ ಪ್ರಜಾಪ್ರಭುತ್ವ ನಾಶ : ಎಸ್.ಶಂಕರ ಕೋಡ್ಲಾ

ಕಲಬುರಗಿ:ಏ.8: `ಇಂದು ಅನಕ್ಷರಸ್ತ ಗೂಂಡಾ ರಾಜಕಾರಣಿಗಳಿಂದ ಇಡೀ ಪ್ರಜಾಪ್ರಭುತ್ವವೇ ಕುಸಿಯುತ್ತಿದೆ, ಹಾಗಾಗಿ ಹಣಬಲದಿಂದ ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ. ಬ್ರಷ್ಟಾಚಾರ ಹೆಚ್ಚುತ್ತಿದೆ ಹಾಗಾಗಿ ವಿದ್ಯಾರ್ಥಿಗಳು ಮನೆ ಮನೆಗಳಲ್ಲಿ ತಂದೆ ತಾಯಿ ಮನೆಯವರಿಗೆ ಹಣ ಪಡೆದು ಮತ ಚಲಾಯಿಸಬೇಡಿ ಎಂದು ಮನವರಿಕೆ ಮಾಡಿರಿ’ ಎಂದು ಹಿರಿಯ ಪತ್ರಕರ್ತರಾದ ಎಸ್.ಶಂಕರ ಕೋಡ್ಲಾ ಅವರು ಹೇಳಿದರು.

ನಗರದ ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ವಾಣಿಜ್ಯ ವಿಜ್ಞಾನ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಮತ್ತು ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಜಂಟಿಯಾಗಿ ಆಯೋಜಿಸಿದ್ದ `ಚುನಾವಣೆಯಲ್ಲಿ ಹಣಬಲ ನಿಯಂತ್ರಿಸಿ ಪ್ರಜಾಪ್ರಭುತ್ವ ಉಳಿಸಿ’ ಎಂಬ ರಾಷ್ಟ್ರೀಯ ಸೆಮಿನಾರನ್ನು ಉದ್ಘಾಟಸಿ ಮಾತನಾಡಿದ ಎಸ್.ಶಂಕರ್ ಕೋಡ್ಲಾ ಅವರು ಭಾರತದ ಹಣೆಬರಹವನ್ನು ಬರೆದವರು ಡಾ.ಬಾಬಾ ಸಾಹೇಬ ಅಂಬೇಡ್ಕರ್. ಹಾಗಾಗಿ ಅಂಬೇಡ್ಕರ್ ಕನಸು ನನಸಾಗಬೇಕಾದರೆ ಚುನಾವಣೆಗಳಲ್ಲಿ ಹಣಬಲವನ್ನು ನಿಯಂತ್ರಿಸಬೇಕು ಎಂದು ವಿಶ್ಲೇಷಿಸಿದರು. ವಿಚಾರ ಸಂಕಿರಣದ ಕುರಿತಂತೆ ಡಾ.ಹರ್ಷವರ್ಧನ್ ಅವರು ವಿದ್ಯಾರ್ಥಿಗಳಲ್ಲಿ ಬ್ರಷ್ಟಾಚಾರ ರಹಿತ ಚುನಾವಣೆಯ ಬಗ್ಗೆ ಅರಿವು ಮೂಡಿಸಲು ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ’ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿಯ ಕಲಬುರಗಿ ವಿಭಾಗದ ಅಧ್ಯಕ್ಷರಾದ ರಮೇಶ್ ದತ್ತರಗಿ ಅವರು ಮಾತನಾಡಿ ಯುವ ಜನರು ಪಾರದರ್ಶಕ ಚುನಾವಣೆಯನ್ನು ತರಲು ಶ್ರಮಿಸಬೇಕಾಗಿದೆ. ಇಂದು ಸ್ವಾಯತ್ತ ಸಂಸ್ಥೆಯಾದ ಭಾರತದ ಚುನಾವಣೆ ಆಯೋಗವೂ ಕೂಡ ಆಡಳಿತ ಸರಕಾರದ ಏಜಂಟರಂತೆ ವರ್ತಿಸುತ್ತಿರುವುದು ಅಪಾಯಕಾರಿಯಾಗಿದೆ' ಎಂದರು. ಕೆ.ಪಿ.ಇ ಸೊಸೈಟಿಯ ಆಡಳಿತಾಧಿಕಾರಿಗಳಾದ ಡಾ.ಚಂದ್ರಶೇಖರ್ ಶೀಲವಂತರ್ ಅವರು ಮಾತನಾಡಿಪ್ರಜಾಪ್ರಭುತ್ವ ಸರಕಾರಗಳು ಸರ್ವಾಧಿಕಾರಿ ಸರಕಾರಗಳಂತೆ ವರ್ತಿಸುತ್ತಿರುವುದು ಅಪಾಯಕಾರಿ’ ಎಂದರು. ಕಾಲೇಜಿನ ಬೇರೆ ಬೇರೆ ತರಗತಿಯ ವಿದ್ಯಾರ್ಥಿಗಳು ಚುನಾವಣ ಭ್ರಷ್ಟ್ರಾಚಾರದ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ಮಂಡಿಸಿದರು. ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ.ಸಿದ್ದಾರ್ಥ ಮದನಕರ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿದ್ದಪ್ಪ ಎಸ್.ಕಾಂತ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ.ವಸಂತ ನಾಶಿ ಅವರು ನಿರೂಪಿಸಿದರು. ಡಾ.ಸಿದ್ದಾರ್ಥ ಮದನಕರ್ ವಂದಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ನಿರ್ಮಲಾ ಶಿರಗಾಪುರ, ಶ್ರೀಮತಿ ಕೌಶಲ್ಯ, ಡಾ. ಸುದರ್ಶನ ಮದನಕರ್, ಡಾ.ಅರುಣ್ ಜೋಳದಕೂಡ್ಲಿಗಿ, ಡಾ.ದತ್ತುರಾಯ ಶಿವರಾಜ, ಡಾ.ಶಿವಕುಮಾರ್, ಡಾ.ಸುರೇಶ ಕುಲಕರ್ಣಿ, ಡಾ.ಅರುಣ್ ಕುಮಾರ್, ಡಾ. ಕರಿಬಸಪ್ಪ, ಗ್ರಂಥಪಾಲಕರಾದ ಡಾ. ರಮೇಶ ಜಾಬನೂರು, ಉಪಸ್ಥಿತರಿದ್ದರು.