Home ಜಿಲ್ಲೆ ಕಲಬುರಗಿ ರೈತರ ಸಾಲ ಮನ್ನಾ ಮಾಡಲು ಒತ್ತಾಯ

ರೈತರ ಸಾಲ ಮನ್ನಾ ಮಾಡಲು ಒತ್ತಾಯ

ಚಿತ್ತಾಪುರ; ಬರ ಘೋಷಣೆ ಮಾಡಿದ್ದರಿಂದ ರೈತರ ಸಾಲ ಮನ್ನಾ, ಜಾನುವಾರುಗಳಿಗೆ ಮೂಲಸೌಕರ್ಯ ಒದಗಿಸಿ ರೈತರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕು ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ನಾಗರೆಡ್ಡಿ ಗೋಪಸೇನ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಗ್ರೇಡ್-2 ತಹಶೀಲ್ದಾರ್ ರಾಜಕುಮಾರ ಮರತೂರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮಳೆಯ ಅಭಾವದಿಂದ ತಾಲೂಕಿನಲ್ಲಿ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರೈತರೊಂದಿಗೆ ಜನ-ಜಾನುವಾರುಗಳು ಸಹ ಕುಡಿಯಲು ನೀರಿಲ್ಲದೇ ಮೇವಿಲ್ಲದೇ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ಈಗಾಗಲೇ ಮುಂಗಾರಿಗೆ ನೀಡಿದ್ದ ಬಿತ್ತನೆ ಬೀಜ ಗೊಬ್ಬರವನ್ನು ಭೂಮಿಗೆ ಹಾಕಿದ್ದು, ಮಳೆ ಇಲ್ಲದೆ ಮೊಳಕೆ ಬಂದು ಮತ್ತು ಮೊಳಕೆ ಬಾರದೇ ತಾಲೂಕಿನಲ್ಲಿ ಬೆಳೆ ನಾಶವಾಗಿರುವುದರಿಂದ, ರೈತ ಮತ್ತು ರೈತನನ್ನು ನಂಬಿರುವ ಜಾನುವಾರುಗಳು ಜೀವನ ನಡೆಸುವುದೇ ಕಷ್ಟವಾಗಿದ್ದು, ಸರ್ಕಾರ ಮತ್ತು ಇಲಾಖೆಯು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಮುಂಗಾರು ಮಳೆ ಬಾರದೆ ಬೆಳೆ ನಷ್ಟ ಅನುಭವಿಸಿ ಸಂಕಷ್ಟದಲ್ಲಿರುವ ತಾಲೂಕಿನ ಎಲ್ಲ ರೈತರಿಗೆ ಪರಿಹಾರ ನೀಡಬೇಕು. ಬರ ನಿರ್ವಹಣೆ ಬೇಕಾಗಿರುವ ಕುಡಿಯುವ ನೀರು, ದನಕರುಗಳಿಗೆ ಮೇವು ಒದಗಿಸಬೇಕು. ಬೆಳೆ ವಿಮೆ ಮಾಡಿಸಿರುವ ತಾಲೂಕಿನ ಎಲ್ಲ ರೈತರಿಗೆ ಮಧ್ಯಂತರ ವಿಮಾ ಪರಿಹಾರ ಒದಗಿಸಬೇಕು. ರೈತರ ಕೃಷಿ ಪಂಪ್ ಸೆಟ್ ಗಳಿಗೆ ಕನಿಷ್ಠ 7ಗಂಟೆಯ ಅಡೆತಡೆ ಇಲ್ಲದ ಗುಣಮಟ್ಟದ 3 ಪೇಸ್ ವಿದ್ಯುತ್ ನೀಡಬೇಕು. ರೈತರು ವಾಣಿಜ್ಯ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್‍ಗಳಲ್ಲಿ ಪಡೆದಿರುವ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಈಗಾಗಲೇ ಸದರಿ ಸಾಲವನ್ನು ಬೇರೆ ಮೂಲದಿಂದ ಪಾವತಿ ಮಾಡಿದ್ದರೂ ಸಹ ಸಾಲಮನ್ನಾ ವ್ಯಾಪ್ತಿಗೆ ಪರಿಗಣಿಸಬೇಕು. ಸಾಲ ಮನ್ನಾ ಯೋಜನೆಯ ವ್ಯಾಪ್ತಿಗೆ ದೊಡ್ಡ ರೈತ / ಸಣ್ಣ ರೈತ ಎನ್ನದೇ ರೈತನಾಗಿರುವವನು ಆದಾಯ ಪಾವತಿದಾರ ಎಂಬುದಾಗಿ ಯಾವುದೇ ವರ್ಗ ತಾರತಮ್ಯ ಮಾಡದೇ ರೈತರೆನ್ನುವವರೆಲ್ಲರ ಸಾಲ ಮನ್ನಾ ಮಾಡ ಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೃಷಿ ಸಮಾಜದ ಜಿಲ್ಲಾ ಪ್ರತಿನಿಧಿ ವೀರಣ್ಣ ಗೌಡ ಪರಸರೆಡ್ಡಿ ನಾಲವಾರ, ಒಕ್ಕಲುತನ ಹುಟ್ಟುವಳಿ ಮಾರಾಟ ಸಹಾಕಾರ ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್, ನಿರ್ದೇಶಕರಾದ ನಿಂಗಣ್ಣ ಹೇಗಲೇರಿ, ಬಾಬು ಕಾಶಿ, ಚನ್ನಬಸಪ್ಪಾ ಗುಂಡಗುರ್ತಿ ಇದ್ದರು.