Home ಜಿಲ್ಲೆ ಸಂವಿಧಾನದ ಆಶಯಗಳ ರಕ್ಷಣೆಗೆ ಆಗ್ರಹ

ಸಂವಿಧಾನದ ಆಶಯಗಳ ರಕ್ಷಣೆಗೆ ಆಗ್ರಹ

ಬೀದರ್: ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಂವಿಧಾನದ ಆಶಯಗಳ ರಕ್ಷಣೆಗೆ ಆಗ್ರಹಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಪಮಾನ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊAಡು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರೂತಿ ಬೌದ್ದೆ ಅವರು ಮಾತನಾಡಿ ಭಾರತವನ್ನು ಯಾವುದೇ ಒಂದು ಜಾತಿ ಅಥವಾ ಧರ್ಮದ ದೇಶವೆಂದು ಬಿಂಬಿಸುವ ಪ್ರಯತ್ನ ಸಲ್ಲದು. ದೇಶದ ವೈವಿಧ್ಯತೆ, ಸಮಾನತೆ ಮತ್ತು ಜಾತ್ಯತೀತ ಮೌಲ್ಯಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ರಾಜಕಾರಣವನ್ನು ತಿರಸ್ಕರಿಸಿ, ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಂತೆ ಸಾಮಾಜಿಕ ನ್ಯಾಯವನ್ನು ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು. ಸ್ವಾತಂತ್ರö್ಯ ಬಂದು ಹಲವು ದಶಕಗಳು ಕಳೆದರೂ ದೇಶದಲ್ಲಿ ಮನುಸ್ಮೃತಿಯಂತಹ ಅಸಮಾನತೆಯನ್ನು ಪ್ರತಿಪಾದಿಸುವ ಚಿಂತನೆಗಳನ್ನು ಮುನ್ನೆಲೆಗೆ ತರುವ ಪ್ರಯತ್ನಗಳು ನಡೆಯುತ್ತಿರುವುದು ಆತಂಕಕಾರಿ. ಜನರ ಹಕ್ಕುಗಳನ್ನು ರಕ್ಷಿಸುವ ಸಂವಿಧಾನವೇ ದೇಶದ ಶ್ರೇಷ್ಠ ಕಾನೂನು. ಅದನ್ನು ಬದಲಾಯಿಸುವ ಅಥವಾ ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ವಿರೋಧ ಪಕ್ಷದ ನಾಯಕರು ಸೇರಿದಂತೆ ಸಂವಿಧಾನಬದ್ಧ ಹುದ್ದೆಗಳನ್ನು ಅಲಂಕರಿಸಿರುವ ಜನಪ್ರತಿನಿಧಿಗಳಿಗೆ ಗೌರವ ನೀಡಬೇಕು. ಯಾವುದೇ ವ್ಯಕ್ತಿ ಅಥವಾ ಸಮುದಾಯಕ್ಕೆ ಅವಮಾನವಾಗುವ ರೀತಿಯ ನಡೆಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಿಸಬಾರದು. ಇಂತಹ ಘಟನೆಗಳು ದಲಿತರು, ಬಹುಜನರು ಹಾಗೂ ಶೋಷಿತ ಸಮುದಾಯಗಳ ಆತ್ಮಗೌರವಕ್ಕೆ ಧಕ್ಕೆ ತರುವಂತಿವೆ ಎಂದು ಅವರು ಹೇಳಿದ್ದರು.

ದಲಿತ ಮುಖಂಡರಾದ ಬಾಬು ಪಾಶ್ವನ್, ಭಾರತವು ಸರ್ವಜಾತಿ, ಸರ್ವಧರ್ಮದ ಜನರು ಸಮಾನವಾಗಿ ಬದುಕುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನವು ಸಮಾನತೆ, ಸ್ವಾತಂತ್ರö್ಯ, ಸಹೋದರತ್ವ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಆದರೆ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ದೇಶದ ದಲಿತರು, ಹಿಂದುಳಿದವರು ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳು ಮತ್ತು ಗೌರವವನ್ನು ಕಾಪಾಡಬೇಕು. ದಲಿತ ಸಮುದಾಯವನ್ನು ಅವಮಾನಿಸುವ ಯಾವುದೇ ರೀತಿಯ ಹೇಳಿಕೆ ಅಥವಾ ನಡೆಗಳನ್ನು ಸಹಿಸಲು ಸಾಧ್ಯವಿಲ್ಲ. ಸಂವಿಧಾನವೇ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕುಗಳ ರಕ್ಷಾಕವಚವಾಗಿದ್ದು, ಅದರ ಆಶಯಗಳನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಪ್ರಜಾಸತ್ತಾತ್ಮಕವಾಗಿ ವಿರೋಧಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಿ.ಪಿ.ಎಂ ಮುಖಂಡ ಬಾಬುರಾವ ಹೊನ್ನಾ ಅವರು ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದ ಸ್ವಾತಂತ್ರö್ಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಮಹತ್ವದ ಕೊಡುಗೆ ನೀಡಿದ್ದಾರೆ. ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸ್ವಾತಂತ್ರö್ಯ, ಸಮಾನತೆ ಮತ್ತು ನ್ಯಾಯದ ಹಕ್ಕುಗಳನ್ನು ಕಲ್ಪಿಸಿದ್ದಾರೆ. ಮಹಿಳೆಯರ ಹಕ್ಕುಗಳಿಗಾಗಿ ಅಂಬೇಡ್ಕರ್ ಅವರು ಮಂಡಿಸಿದ ಹಿಂದೂ ಕೋಡ್ ಬಿಲ್‌ಗೆ ವಿರೋಧ ವ್ಯಕ್ತವಾದ ಸಂದರ್ಭದಲ್ಲಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಹೇಳಿದರು. ದೇಶದ ಸ್ವಾತಂತ್ರö್ಯ ಹೋರಾಟದ ಇತಿಹಾಸವನ್ನು ಮರೆತು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಡೆಗಣಿಸುವ ಪ್ರವೃತ್ತಿ ಸರಿಯಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ವಿಚಾರಧಾರೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದು ತಿಳಿಸಿದರು.
“ಸಂವಿಧಾನದ ರಕ್ಷಣೆಯೇ ದೇಶದ ಪ್ರಜಾಪ್ರಭುತ್ವದ ರಕ್ಷಣೆ. ಅಂಬೇಡ್ಕರ್ ಅವರ ವಿಚಾರಗಳನ್ನು ಮುಂದಿಟ್ಟುಕೊAಡು ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ” ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಅರುಣ ಪಟೇಲ್, ರಾಜಕುಮಾರ ವಾಘಮಾರೆ, ವಿಠಲದಾಸ್ ಪ್ಯಾಗೆ, ರಮೇಶ ಉಮಾಪೂರೆ, ರಮೇಶ ಬೆಲ್ದಾರ್, ಅಶೋಕ ಗಾಯಕವಾಡ, ಶಿವರಾಜ ತಡಪಳ್ಳಿ, ವಾಮನ ಮೈಸಲಗೆ, ಶಿರೋಮಣಿ ಹಲಗೆ, ವಿಜಯಕುಮಾರ ಬಾವಿಕಟ್ಟಿ. ಝರೆಪ್ಪಾ ವರ್ಮಾ, ಶಿವಕುಮಾರ ನಿಲಿಕಟ್ಟೆ, ಭರತ ಕಾಂಬ್ಳೆ, ಸುಬ್ಬಣ್ಣ ಕರಕನಳ್ಳಿ, ಸತೀಶ ರತ್ನಾಕರ, ಉತ್ತಮ ಮಾಜ್ರೆಕರ್, ಶ್ರೀನಿವಾಸ ದಯಾಳ, ರಾಹುಲ ಹಾಲಹಿಪ್ಪರಗಾ, ವಿನೋದ ಬಂದಗೆ, ಬಸವರಾಜ ಭಾವಿದೊಡ್ಡಿ, ಮಲ್ಲಿಕಾರ್ಜುನ ಮಾಲೆ, ಶಿವಲಿಂಗಪ್ಪ ಕಡಿಮನಿ, ಸುಭಾಷ ವರ್ಮಾ, ರಾಜಕುಮಾರ ಮೂಲಭೂತಿ, ಅಂಬದಾಸ್ ಗಾಯಕವಾಡ, ಸುನೀಲ್ ಸಂಗಮ, ಶ್ರೀಪತರಾವ್ ದೀನೆ, ಸದಾನಂದ ಕಾಳೆಕಾರ್, ಗೌತಮ ಭೋಸಲೆ, ಮಲ್ಲಿಕಾರ್ಜುನ ಮೋಳಕೆರೆ, ಸತೀಶ ಕಡೆಮಾನಿ, ತುಕಾರಾವ ಕಡೆಮಾನಿ, ಸಾಯಿನಾಥ ಕಾಳೇಕರ್, ಸಿದ್ದಾರ್ಥ ಕಾಂಬ್ಳೆ, ಅಜೇಯ ದೀನೆ, ಜಗದೀಶ ಬೀರಾದಾರ, ಪವನ ಮಿಠಾರೆ ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.