Home ಜಿಲ್ಲೆ ತುಮಕೂರು ಫುಟ್‌ಪಾತ್‌ನಲ್ಲಿರುವ ಗೂಡಂಗಡಿಗಳ ತೆರವಿಗೆ ಒತ್ತಾಯ

ಫುಟ್‌ಪಾತ್‌ನಲ್ಲಿರುವ ಗೂಡಂಗಡಿಗಳ ತೆರವಿಗೆ ಒತ್ತಾಯ

ಹುಳಿಯಾರು, ಮಾ. ೬- ಪಟ್ಟಣದ ಬೀದಿ ಬದಿ ವ್ಯಾಪಾರಿಗಳು ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಫುಟ್‌ಪಾತ್ ಮೇಲೆ ಸಾರ್ವಜನಿಕರಿಗೆ ಅಡ್ಡಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳ ತೆರವು, ಪಟ್ಟಣ ಪಂಚಾಯ್ತಿಯಲ್ಲಿನ ಸಿಬ್ಬಂದಿ ಕೊರತೆ ನೀಗಿಸುವುದು ಹಾಗೂ ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಳಿಯಾರು ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಮುಖ್ಯ ರಸ್ತೆಗಳ ಫುಟ್‌ಪಾತ್‌ಗಳ ಮೇಲೆ ವ್ಯಾಪಾರ ವಹಿವಾಟು ನಡೆಯುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಅಲ್ಲದೆ, ವ್ಯಾಪಾರಿಗಳು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದರಿಂದ ಅಶುಚಿತ್ವ ನಿರ್ಮಾಣವಾಗುತ್ತಿದೆ. ಆದ್ದರಿಂದ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಿ, ಫುಟ್‌ಪಾತ್‌ಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ವೇದಿಕೆ ಒತ್ತಾಯಿಸಿತು.


ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಗಳು, ಶೀಘ್ರದಲ್ಲೇ ವ್ಯಾಪಾರಿಗಳ ಸಭೆ ಕರೆದು ತಿಳುವಳಿಕೆ ನೀಡಲಾಗುವುದು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.


ಕಳೆದ ಹಲವು ವರ್ಷಗಳಿಂದ ಪಟ್ಟಣ ಪಂಚಾಯ್ತಿಯಲ್ಲಿ ಅಗತ್ಯ ಸಿಬ್ಬಂದಿ ಮತ್ತು ಪೌರ ಕಾರ್ಮಿಕರ ಕೊರತೆ ಇರುವುದರಿಂದ ಆಡಳಿತಾತ್ಮಕ ಕೆಲಸಗಳು ಹಾಗೂ ಸ್ವಚ್ಛತಾ ಕಾರ್ಯ ಕುಂಠಿತಗೊಂಡಿದೆ. ಚರಂಡಿಗಳಲ್ಲಿ ನೀರು ನಿಂತು ರೋಗರುಜಿನಗಳು ಹರಡುವ ಭೀತಿ ಎದುರಾಗಿದೆ. ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಪಟ್ಟಣದಾದ್ಯಂತ ಸ್ವಚ್ಛತೆ ಕಾಪಾಡಬೇಕು ಎಂದು ನಿಯೋಗ ಮನವಿ ಮಾಡಿತು.


ಈ ಬಗ್ಗೆ ಮಾತನಾಡಿದ ಮುಖ್ಯಾಧಿಕಾರಿಗಳು, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಈಗಾಗಲೇ ಚಾಲನೆಯಲ್ಲಿದೆ ಎಂದು ಭರವಸೆ ನೀಡಿದರು.


ಪಟ್ಟಣದಲ್ಲಿ ೪೦ ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಹೋಟೆಲ್ ಮಾಲೀಕರು, ವ್ಯಾಪಾರಿಗಳು ಹಾಗೂ ಸಂಜೀವಿನಿ ಮಹಿಳಾ ಸಂಘಗಳ ಸಭೆ ನಡೆಸಿ ಪ್ಲಾಸ್ಟಿಕ್ ಬದಲಿ ವಸ್ತುಗಳ ಬಳಕೆಗೆ ಜಾಗೃತಿ ಮೂಡಿಸಬೇಕು ಎಂದು ವೇದಿಕೆ ಆಗ್ರಹಿಸಿತು.


ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಗಳು ಪಟ್ಟಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ತಡೆಯಲು ಈಗಾಗಲೇ ಕರಪತ್ರ ಹಂಚುವ ಮೂಲಕ ಅರಿವು ಮೂಡಿಸಲಾಗಿದ್ದು, ಹೋಟೆಲ್ ಮತ್ತು ಅಂಗಡಿ ಮಾಲೀಕರಿಗೆ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಲಾಗಿದೆ. ಸಂತೆ ವ್ಯಾಪಾರಿಗಳಿಗೆ ಸಹ ಎಚ್ಚರಿಕೆ ನೀಡಲಾಗಿದ್ದು, ಕೆಲವೆಡೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.


ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ಸಹಕರಿಸಿದರೆ ಮಾತ್ರ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಸಾಧ್ಯ ಎಂದು ತಿಳಿಸಿದರು.


ಬಸ್ ನಿಲ್ದಾಣ, ಉಮಾ ಸ್ಟೋರ್ ಹಾಗೂ ಶಿಲ್ಪಾ ಸ್ಟೋರ್ ಮುಂಭಾಗದ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಕೆರೆ ಅಂಗಳದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ ಮಾಡಬೇಕು ಎಂದು ದಲಿತ ಸಹಾಯವಾಣಿಯ ಹನುಮಂತಪ್ಪ ಒತ್ತಾಯಿಸಿದರು.


ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಮುಖ್ಯ ಅಧಿಕಾರಿ ಮಂಜುನಾಥ್ ತಿಳಿಸಿದ್ದು, ಶೀಘ್ರವೇ ಇದಕ್ಕೆಲ್ಲ ಪರಿಹಾರ ಸೂಚಿಸುವುದಾಗಿ ತಿಳಿಸಿದರು.


ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ರಾಮಕೃಷ್ಣಪ್ಪ, ಎನ್.ಇಂದಿರಮ್ಮ, ಜಯಲಕ್ಷ್ಮಮ್ಮ, ಮಮತಾ ನಟರಾಜ್, ನಂದಾವಾಡಗಿ ದಲಿತ ಸಹಾಯವಾಣಿಯ ಹನುಮಂತಪ್ಪ, ಕಾಮನಬಿಲ್ಲು ಫೌಂಡೇಶನ್‌ನ ಚನ್ನಕೇಶವ, ಶಂಕರೇಶ್ ಮತ್ತಿತರರು ಉಪಸ್ಥಿತರಿದ್ದರು.