Home ಜಿಲ್ಲೆ 371(ಜೆ) ಸೌಲಭ್ಯಕ್ಕೆ ವಿಜಯಪುರ ಸೇರ್ಪಡೆಗೆ ಆಗ್ರಹಸತ್ಯಾಗ್ರಹಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬೆಂಬಲ

371(ಜೆ) ಸೌಲಭ್ಯಕ್ಕೆ ವಿಜಯಪುರ ಸೇರ್ಪಡೆಗೆ ಆಗ್ರಹಸತ್ಯಾಗ್ರಹಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬೆಂಬಲ

ವಿಜಯಪುರ, ಅ. 10: ವಿಜಯಪುರ ಜಿಲ್ಲೆಯನ್ನು ಸಂವಿಧಾನದ 371(ಜೆ) ಕಲಂ ವ್ಯಾಪ್ತಿಗೆ ಮರುಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಸಿಂದಗಿಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೆಂಬಲ ವ್ಯಕ್ತಪಡಿಸಿದರು.
ಸಿಂದಗಿ ನಗರದ ಬಸವೇಶ್ವರ ವೃತ್ತದ ಬಳಿ ಗೋಪಕ ಚಳವಳಿಯ ರೂವಾರಿ ಶ್ರೀ ರೇ.ಚ. ರೇವಡಿಗಾರ ಪ್ರತಿಷ್ಠಾನ ಹಾಗೂ 371(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ ಏಳು ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದ ವಿಜಯೇಂದ್ರ, ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿ ಪ್ರಮುಖ ರಂಗನಾಥ ತೋಫೆ, ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸಿನಂತೆ ವಿಜಯಪುರ ಜಿಲ್ಲೆಯನ್ನು ಹೈದರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ) ಭಾಗದ ಸಂವಿಧಾನದ 371(ಜೆ) ಕಲಂ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕಾಗಿತ್ತು. ಆದರೆ, 2012-13ರಲ್ಲಿ 371(ಜೆ) ಕಲಂ ಜಾರಿಗೊಳಿಸುವ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯನ್ನು ಕೈಬಿಡಲಾಗಿದೆ ಎಂದು ಹೇಳಿದರು.
ಜಿಲ್ಲೆಯನ್ನು 371(ಜೆ) ವ್ಯಾಪ್ತಿಗೆ ಮರುಸೇರ್ಪಡೆಗೊಳಿಸಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ವಿಧಾನಸಭೆಯಲ್ಲಿ ಚರ್ಚೆ ನಡೆಸಬೇಕು ಎಂದು ಅವರು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ವಿಜಯೇಂದ್ರ, ಡಾ. ನಂಜುಂಡಪ್ಪ ವರದಿ ಪ್ರಕಾರ ವಿಜಯಪುರ ಜಿಲ್ಲೆಗೂ 371(ಜೆ) ಸೌಲಭ್ಯ ದೊರೆಯಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು 371(ಜೆ) ವ್ಯಾಪ್ತಿಗೆ ಸೇರಿಸುವ ಕುರಿತು ರಾಜ್ಯ ಸರ್ಕಾರದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಾಯಿಸುವುದಾಗಿ ಭರವಸೆ ನೀಡಿದರು. ಕೇಂದ್ರ ಸರ್ಕಾರದ ಮಟ್ಟದಲ್ಲಿಯೂ ಈ ಕುರಿತು ಚರ್ಚಿಸಿ ನ್ಯಾಯ ದೊರಕಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ರಮೇಶ ಭೂಸನೂರ, ಸಮಿತಿ ಸದಸ್ಯರಾದ ಸಿದ್ದರಾಮ ಪಾಟೀಲ, ಪಂಡಿತ ಯಂಪೂರೆ, ಎಂ.ಎಂ. ಹಂಗರಗಿ, ಎಸ್.ಎಸ್. ಮಲ್ಲೇದ, ದಾನಪ್ಪಗೌಡ ಚನಗೊಂಡ, ಸಿದ್ದು ಕಡಕಂಚಿ, ಅರವಿಂದ ಕುಲಕರ್ಣಿ, ಗುರುರಾಜ ಪಡಶೆಟ್ಟಿ, ಅಂಬರೀಶ ಸುಣಗಾರ, ಆನಂದ ಶಾಬಾದಿ, ಮಲ್ಲಿಕಾರ್ಜುನ ಅಲ್ಲಾಪುರ, ಪೀರು ಕೇರೂರ, ಮಂಡಳ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಸಿದ್ದು ಬುಳ್ಳಾ, ಅಶೋಕ ಅಲ್ಲಾಪುರ, ಎಸ್.ಆರ್. ಪಾಟೀಲ, ಸತೀಶ ಹಿರೇಮಠ, ಪ್ರಶಾಂತ ಕದ್ದರಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.