Home ಜಿಲ್ಲೆ ಹಿಂದಿ ವಿಷಯದ ಅಂಕಗಳನ್ನು ಪರಿಗಣಿಸಲು ಆಗ್ರಹ

ಹಿಂದಿ ವಿಷಯದ ಅಂಕಗಳನ್ನು ಪರಿಗಣಿಸಲು ಆಗ್ರಹ

ಭಾಲ್ಕಿ:ಎ.1:ಪಟ್ಟಣದ ಬಿಇಒ ಕಛೇರಿಯಲ್ಲಿ 2026ರ ಎಸ್‍ಎಸ್‍ಎಲ್‍ಸಿ ಹಿಂದಿ ಮುಖ್ಯ ಪರೀಕ್ಷೆಯ ವಿಷಯದ ಅಂಕಗಳನ್ನು ಯಥಾವತ್ತಾಗಿ ಮುಂದುವರೆಸಲು ಆಗ್ರಹಿಸಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಬರೆದ ಮನವಿ ಪತ್ರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ರವಾನಿಸಲಾಯಿತು.

ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಇತ್ತೀಚೆಗೆ 2026 ಎಸ್‍ಎಸ್‍ಎಲ್‍ಸಿ ಹಿಂದಿ ಮುಖ್ಯ ಪರೀಕ್ಷೆಯ ವಿಷಯದ ಅಂಕಗಳನ್ನು ಕೇವಲ ಗ್ರೇಡಿಂಗ್‍ಗಳಿಗಾಗಿ ಮಾತ್ರ ಪರಿಗಣಿಸಲಾಗುತ್ತದೆ ಎಂದು ಆದೇಶಿಸಿದ್ದು ಅವೈಜ್ಞಾನಿಕವಾಗಿದೆ. ಕಾರಣ ಹಿಂದಿ ವಿಷಯ ಬೋಧನೆ ಮಾಡುವ ಶಿಕ್ಷಕರ ವೃತ್ತಿ ಬದುಕು ಬೀದಿ ಪಾಲಾಗುತ್ತದೆ. ಮತ್ತುವರ್ಷವಿಡಿ ಹಿಂದಿ ವಿಷಯ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯ ಮಾಡಿದಂತಾಗುತ್ತದೆ.ಹಿಂದಿ ಕೇವಲ ಒಂದು ವಿಷಯವಲ್ಲ.ಅದು ರಾಷ್ಟ್ರದ ವಿವಿಧ ರಾಜ್ಯಗಳ ನಡುವೆ ಸಂಪರ್ಕ ಸಾಧಿಸುವ ಪ್ರಮುಖ ಭಾಷೆಯಾಗಿದೆ.ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಬಹು ಸಂಖ್ಯಾತ ಜನರ ವ್ಯವಹಾರಿಕ ಭಾಷೆ ಹಿಂದಿಯಾಗಿದೆ.ಆದುದರಿಂದ ಈ ಹಿಂದೆ ಶಿಕ್ಷಣ ಇಲಾಖೆಯಲ್ಲಿದ್ದ ತ್ರಿಭಾಷಾ ಸೂತ್ರವನ್ನು ಯಥಾವತ್ತಾಗಿ ಮುಂದುವರೆಸಿ ವಿದ್ಯಾರ್ಥಿ ,ಶಿಕ್ಷಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತಾತ್ರಿ ಕಾಟಕರ ಸೇರಿದಂತೆ ಇತರೆ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.