
ಭಾಲ್ಕಿ:ಜೂ.4: ನಗರದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಮಹಾತ್ಮ ಗಾಂಧಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಜತೆಗೆ ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ತಾಲೂಕು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. ಈ ಕುರಿತು ನಗರದ ತಹಸೀಲ್ ಕಚೇರಿಯಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ ಮೂಲಕ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಪ್ರವೀಣ ಮೋರೆ ಮಾತನಾಡಿ, ನಗರದಲ್ಲಿ ಮಹಾತ್ಮ ಗಾಂಧಿ ಪದವಿ ಪೂರ್ವ ಕಾಲೇಜಿನ ಹೆಸರಿನಲ್ಲಿ ಅನಧಿಕೃತ ಶಿಕ್ಷಣ ಸಂಸ್ಥೆ ನಡೆಸಲಾಗುತ್ತಿದೆ. ಈ ಸಂಸ್ಥೆಯಲ್ಲಿ ಕೇವಲ ದಾಖಲೆಗಳಲ್ಲಿ ಮಾತ್ರ ನಡೆಯುತ್ತಿದೆ. ಕಾಲೇಜಿಗೆ
ಯಾವುದೇ ಸ್ವಂತ ಅಥವಾ ಬಾಡಿಗೆ ಕಟ್ಟಡವಿಲ್ಲ, ಅಗತ್ಯವಿರುವ ಮೂಲ ಸೌಕರ್ಯಗಳಿಲ್ಲ, ಯಾವುದೇ ಬೋಧಕ/ಬೋಧಕೇತರ ಸಿಬ್ಬಂದಿ ಇಲ್ಲ ಮತ್ತು ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಕೂಡ ಇಲ್ಲಿ ನಿಜವಾಗಿ ವ್ಯಾಸಂಗ ಮಾಡುತ್ತಿಲ್ಲ. ಕೇವಲ ಕಾಗದದ ಹಾಳೆಗಳಲ್ಲಿ ವಿದ್ಯಾರ್ಥಿಗಳ ಹೆಸರನ್ನು ಸೃಷ್ಟಿಸಿ ಈ ನಕಲಿ ಕಾಲೇಜನ್ನು ನಡೆಸಲಾಗುತ್ತಿದೆ.
ಈ ಕುರಿತು ನಾನು ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದೆ. ಆದರೆ, ಸದರಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ, ಅಕ್ರಮವನ್ನು ಮುಚ್ಚಿಹಾಕುವ ಉದ್ದೇಶದಿಂದ ಬೇರೆ ಸಂಸ್ಥೆಯ/ಶಾಲೆಯ ಗೋಡೆಗೆ ಈ ನಕಲಿ ಕಾಲೇಜಿನ ಬೋರ್ಡ್ ಅನ್ನು ತಾತ್ಕಾಲಿಕವಾಗಿ ಅಂಟಿಸಿ, ಅದನ್ನೇ ಕಾಲೇಜಿನ ಕಟ್ಟಡವೆಂದು ಬಿಂಬಿಸಿ ನನಗೆ ಸುಳ್ಳು ಮತ್ತು ದಾರಿ ತಪ್ಪಿಸುವ ಮಾಹಿತಿಯನ್ನು ನೀಡಿದ್ದಾರೆ.
ಶಿಕ್ಷಣ ಇಲಾಖೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ, ಸರಕಾರದ ಸವಲತ್ತು ಅಥವಾ ಅನುದಾನವನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಈ ನಕಲಿ ಕಾಲೇಜನ್ನು ಸೃಷ್ಟಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಇದಕ್ಕೆ ಸ್ಥಳೀಯ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ಕೂಡ ಶಾಮೀಲಾಗಿರುವ ಶಂಕೆ ಇದೆ.
ಆದ್ದರಿಂದ, ಮಾನ್ಯ ನಿರ್ದೇಶಕರು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಬೆಂಗಳೂರಿನ ಉನ್ನತ ಮಟ್ಟದ ಅಧಿಕಾರಿಗಳ ತಂಡದಿಂದ ಜಂಟಿ ಸ್ಥಳ ಪರಿಶೀಲನೆ ನಡೆಸಿ, ಈ ನಕಲಿ ಕಾಲೇಜಿನ ಮಾನ್ಯತೆಯನ್ನು ತಕ್ಷಣವೇ ರದ್ದುಪಡಿಸಬೇಕು. ಹಾಗೆಯೇ, ಸರಕಾರಕ್ಕೆ ವಂಚಿಸಿ ಸುಳ್ಳು ವರದಿ ನೀಡಿದ ಬೀದರ್ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಮತ್ತು ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಕಾನೂನು ರೀತಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕಾಗಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಪ್ರಮುಖರಾದ ತುಕಾರಾಮ ಕಾಸ್ಲೆ, ರಾಜಕುಮಾರ, ಶಶಿಕಾಂತ ಸೇರಿದಂತೆ ಹಲವರು ಇದ್ದರು.


























