ಮುಖ್ಯ ವಾಣಿಜ್ಯ ನಿರೀಕ್ಷಕ ರಾಹುಲ್ ವರ್ಗಾವಣೆಗೆ ಆಗ್ರಹ

ಕಲಬುರಗಿ:ಜೂ.4: ಕಲಬುರಗಿಯಲ್ಲಿ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಸೋಲಾಪುರಿನ ಅಖಿಲ ಭಾರತ ಎಸ್‍ಸಿ ಎಸ್‍ಟಿ ರೈಲ್ವೆ ನೌಕರರ ಬೇಡಿಕೆ ಈಡೇರಿಸುವಂತೆ ಸಂಘದ ಅಧ್ಯಕ್ಷ ಸಚಿನ್ ಬನ್ಸುಡೆ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಇಲಾಖಾ ಪರೀಕ್ಷೆಯ ಮೂಲಕ ಆಯ್ಕೆಯಾದ 90 ಪಾಯಿಂಟ್‍ಮೆನ್‍ಗಳನ್ನು ಬಿಡುಗಡೆ ಮಾಡಬೇಕು. ಆಡಳಿತದನುಗುಣವಾಗಿ ಒಂದು ಅಥವಾ ಎರಡು ಹಂತದಲ್ಲಿ ತರಬೇತಿ ನೀಡಬೇಕು ಎಂದು ಆಗ್ರಹಿಸಲಾಯಿತು.
ಸಹಾಯಕ ಲೋಕೋ ಪೈಲಟ್ ಸಂಘವು ಆಡಳಿತದ ಸೂಕ್ತತೆಗೆ ಅನುಗುಣವಾಗಿ ವಿವಿಧ ಬ್ಯಾಚ್‍ಗಳಲ್ಲಿ ತರಬೇತಿಗಾಗಿ ಮೇಲೆ ತಿಳಿಸಲಾದ ವಿವಿಧ ಇಲಾಖೆಗಳ 228 ಉದ್ಯೋಗಿಗಳನ್ನು ಬಿಡುಗಡೆ ಮಾಡಲು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಒತ್ತಾಯಿಸಿತು.
ಕಲಬುರ್ಗಿ-ವಾಡಿ ವಿಭಾಗದ ಮಹಿಳಾ ಮತ್ತು ಎಸ್‍ಸಿ/ಎಸ್‍ಟಿ ಉದ್ಯೋಗಿಗಳಿಗೆ ಮುಖ್ಯ ವಾಣಿಜ್ಯ ನಿರೀಕ್ಷಕ ರಾಹುಲ್ ಕುಮಾರ್ ಅವರು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಈಗಾಗಲೇ ಸಂಘಕ್ಕೆ ಲಿಖಿತವಾಗಿ ದೂರು ಬಂದಿದೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದರು. ಈ ಬಗ್ಗೆ ಸೋಲಾಪುರದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಇಲ್ಲಿಯವರೆಗೆ ರಾಹುಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಿಲ್ಲ ಅಥವಾ ಸಂಘಕ್ಕೆ ಯಾವುದೇ ಕ್ಷಮೆಯಾಚನೆ ಬಂದಿಲ್ಲ. ಹೀಗಾಗಿ ರಾಹುಲ್ ಕುಮಾರ್ ಅವರ ವರ್ತನೆಯಿಂದಾಗಿ ಕೋಮು ಸಾಮರಸ್ಯ ಹಾಳಾಗಿದಲ್ಲದೆ, ಕರ್ತವ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಕಲಬುರಗಿಯಿಂದ ತಕ್ಷಣ ಅವರನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ವಿಭಾಗೀಯ ಹೆಚ್ಚುವರಿ ಕಾರ್ಯದರ್ಶಿ ಸುಧೀರ್ ಸಾಳ್ವೆ, ವಿಭಾಗೀಯ ಖಜಾಂಚಿ ಕಲ್ಯಾಣ್ ಕುಮಾರ್ ಗಟ್ಟು, ಶಾಖಾ ಕಾರ್ಯದರ್ಶಿ ಅವಿನಾಶ್ ಶ್ರೀಮಂತ್, ಶಾಖಾ ಅಧ್ಯಕ್ಷ ವಿನೋದ್ ಕುಮಾರ್, ದತ್ತು ಕೋಳಿ, ಶಿವಾಜಿ ಕತ್ತಿ, ಸುನೀಲ್ ನಾಯ್ಕೋಡಿ, ಮಹೀಂದ್ರ, ಕುಮಾರ್ ಮಾಡ್ಯಾಳ್ಕರ್ ಉಪಸ್ಥಿತರಿದ್ದರು