Home ಜಿಲ್ಲೆ ವಾಲ್ಮೀಕಿ ಜಯಂತಿಗೆ ಶಿಷ್ಟಾಚಾರ ಪಾಲಿಸದ ತಹಶೀಲ್ದಾರ್ ಅಮಾನತಿಗೆ ಆಗ್ರಹ

ವಾಲ್ಮೀಕಿ ಜಯಂತಿಗೆ ಶಿಷ್ಟಾಚಾರ ಪಾಲಿಸದ ತಹಶೀಲ್ದಾರ್ ಅಮಾನತಿಗೆ ಆಗ್ರಹ

ವಿಜಯಪುರ, ಅ. 28: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶಿಷ್ಟಾಚಾರಕ್ಕೆ ವಿರುದ್ಧವಾಗಿ ನಡೆಸಿ, ವಾಲ್ಮೀಕಿ ಜನಾಂಗದವರನ್ನು ಜಾತಿ ನಿಂದನೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ದೇವರಹಿಪ್ಪರಗಿ ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಆಗ್ರಹಿಸಿ ವಾಲ್ಮೀಕಿ ಸಮಾಜದ ಮುಖಂಡರು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ದೇವರಹಿಪ್ಪರಗಿ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, ವಾಲ್ಮೀಕಿ ಜಯಂತಿಯನ್ನು ಶಿಷ್ಟಾಚಾರ ಪ್ರಕಾರ ಆಚರಿಸುವಂತೆ ಸಮಾಜದ ಮುಖಂಡರು ಮನವಿ ಮಾಡಿಕೊಂಡಿದ್ದರೂ ತಹಶೀಲ್ದಾರ್ ಅವರು ಅದಕ್ಕೆ ಸ್ಪಂದಿಸದೆ ವಾಲ್ಮೀಕಿ ಮುಖಂಡರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ. ಇದು ಖಂಡನೀಯವಾಗಿದ್ದು, ತಕ್ಷಣವೇ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ರವೀಂದ್ರ ಭಗವಂತಪ್ಪ ಮಾತನಾಡಿ, ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ 20 ಶಾಸಕರಿದ್ದರೂ ಸಮುದಾಯದ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಸರಿಪಡಿಸಲು ಯಾರೂ ಮುಂದಾಗುತ್ತಿಲ್ಲ. ಇದು ನೋವಿನ ಸಂಗತಿಯಾಗಿದೆ. ವಾಲ್ಮೀಕಿ ಜಯಂತಿಯನ್ನು ಶಿಷ್ಟಾಚಾರದಂತೆ ಆಚರಿಸದ ದೇವರಹಿಪ್ಪರಗಿ ತಹಶೀಲ್ದಾರ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಾಲ್ಮೀಕಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಿ.ಎಸ್. ಗಸ್ತಿ ಮಾತನಾಡಿ, ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದರು.
ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ತಳವಾರ ಸಮಾಜ ಹಿಂದುಳಿದ ವರ್ಗಕ್ಕೆ ಸೇರಿದ್ದು, ವಿಜಯಪುರ ಜಿಲ್ಲಾಡಳಿತ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ನೀಡುತ್ತಿರುವುದು ಕಾನೂನುಬಾಹಿರವಾಗಿದೆ ಎಂದು ಆರೋಪಿಸಿದರು. ಈಗಾಗಲೇ ನೀಡಿರುವ ಸುಮಾರು 3 ಲಕ್ಷ ಜಾತಿ ಪ್ರಮಾಣಪತ್ರಗಳನ್ನು ಕೂಡಲೇ ಹಿಂಪಡೆಯಬೇಕು. ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಕಲಿ ಜಾತಿ ಪ್ರಮಾಣಪತ್ರ ನೀಡುವುದನ್ನು ತಕ್ಷಣ ತಡೆಯಬೇಕು. ವಾಲ್ಮೀಕಿ ಸಮಾಜದ ಅರ್ಹರಿಗೆ ಆಗುತ್ತಿರುವ ಅನ್ಯಾಯವನ್ನು ಸರ್ಕಾರ ತಡೆದು ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ವಾಲ್ಮೀಕಿ ಸಮಾಜದ 17 ಶಾಸಕರು, 3 ಸಂಸದರು, 3 ವಿಧಾನ ಪರಿಷತ್ ಸದಸ್ಯರು ಹಾಗೂ ಇಬ್ಬರು ಸಚಿವರು ಇದ್ದರೂ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದ ಮುಖಂಡರು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಳಸಿದ್ದ ನಾಯ್ಕೋಡಿ, ಸದಾಶಿವ ಕಡ್ಲೇವಾಡ, ಮಲ್ಲಪ್ಪ ಕವಲಗಿ, ವಿಠ್ಠಲ ದೇವಿನಾಳ, ಶೇಖರ ಗಜ್ಜಳಗಿ, ಸೋಮಲಿಂಗ ಜಮಾದಾರ, ಬಂಡೆಪ್ಪ ಕವಲ್ದಾರ, ದ್ಯಾಮಣ್ಣ ಬಡಿಗೇರ, ಮಂಜುನಾಥ ಆಲಗೂರ್, ಜಗದೇವ ಸೇರಿದಂತೆ ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.