
ಕೋಲಾರ,ನ.೨೬: ಕಟಾವು ಮಾಡಿದ ಮರ ಸಾಗಾಣೆ ವಿಚಾರದಲ್ಲಿ ೪೫ ಸಾವಿರ ರೂ ಹಣ(ಲಂಚ) ಪಡೆದ ಪ್ರಕರಣದ ಆರೋಪದಲ್ಲಿ ವಿಚಾರಣೆಗೆ ಒಳಗಾಗಿರುವ, ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ತಕ್ಷಣ ಅಮಾನತು ಮಾಡಬೇಕೆಂದು ನಮ್ಮ ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಒತ್ತಾಯಿಸಿದ್ದಾರೆ.
ಈ ಬಗ್ಗೆ ದಾಖಲೆಗಳು ಹಾಗೂ ನಿದರ್ಶನಗಳ ಸಮೇತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಉಪ ವಲಯದ ಅರಣ್ಯಾಧಿಕಾರಿ ವಿ.ಹರೀಶ್ ಹಾಗೂ ಇವರ ಸಹಾಯಕ ಸಿಬ್ಬಂದಿ ಟಿ.ವಿ.ರಾಜೇಶ್ ವಿರುದ್ಧ, ಅರಣ್ಯ ಇಲಾಖೆಯ ಜಿಲ್ಲಾ ಹಾಗೂ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳಿಗೆ ದೂರನ್ನು ದಾಖಲಿಸಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಕೆಡಿಪಿ ಸಭೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ ರೈತ ಮುಖಂಡ ಗಣೇಶ್‌ಗೌಡ ದಾಖಲೆಗಳ ಸಮೇತ ವಿವರಿಸಿ ಅರಣ್ಯ ಅಧಿಕಾರಿಯಿಂದ ಆಗುತ್ತಿರುವ ತೊಂದರೆ ಬಗ್ಗೆ ವಿವರಿಸಿದ್ದರು.
ಈ ವಿಚಾರವು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆದು ಅರಣ್ಯ ಅಧಿಕಾರಿಗಳ ಲಂಚಗುಳಿತನ, ರೈತರಿಗೆ ಕಿರುಕುಳ, ಕೇಸು ಹಾಕುವ ಹೆಸರಿನಲ್ಲಿ ಬೆದರಿಸುವ ಬಗ್ಗೆ ಕಾವೇರಿದ ಚರ್ಚೆ ನಡೆಯಿತು. ಲಂಚ ಪಡೆದು ತೊಂದರೆ ಕೊಟ್ಟ ಅರಣ್ಯ ಅಧಿಕಾರಿ ವಿರುದ್ಧ ದೂರು ನೀಡಿದರೂ ಇದುವರೆಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಚುನಾಯಿತ ಜನಪ್ರತಿನಿಧಿಗಳು ಪ್ರಶ್ನಿಸಿದರು.
ಆಗ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯು ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರೂ ಸಹ ಇದುವರೆಗು, ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಹಾಗೂ ಕಳಂಕಿತ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ರಕ್ಷಿಸುವ ತಂತ್ರಗಳು ಪ್ರಾರಂಭವಾಗಿವೆ ಎಂದು ಗಣೇಶ್‌ಗೌಡ ಆಪಾದಿಸಿದ್ದಾರೆ.
ಆಗಿದ್ದೇನು ? ಕೋಲಾರ ತಾಲೂಕಿನ ದೊಡ್ನಹಳ್ಳಿ ನಿವಾಸಿ ವೆಂಕಟರಾಮಪ್ಪ ಎಂಬುವವರ ತಮ್ಮ ಹೊಲದ ಜಮೀನಿನಲ್ಲಿ ಬೆಳೆದಿದ್ದ ಆಲದ ಮರ ತೆರವಿಗೆ ತಾಲೂಕಿನ ಹುತ್ತೂರು ಹೋಬಳಿ ಚಾಮರಹಳ್ಳಿ ನಿವಾಸಿಯಾಗಿರುವ, ಮರದ ವ್ಯಾಪಾರಿ ಮುನಿಶಾಮಿ ಎಂಬುವವರಿಗೆ ಮರದ ಕಟಾವು ಹಾಗೂ ಸಾಗಾಣೆಗೆ ೧.೨೫ ಲಕ್ಷ ರೂಗೆ ಬೆಲೆ ನಿಗದಿಪಡಿಸಿ ಒಪ್ಪಿಸಿದ್ದರು.
ಇದರ ಪ್ರಕಾರ ರೈತ ವೆಂಕಟರಾಮಪ್ಪ ಅವರು ಮರದ ಕಟಾವು ಹಾಗೂ ಸಾಗಾಣೆಗೆ ಅನುಮತಿ ಪತ್ರ ಬೇಕೆಂದು ಕೇಳಲಾಗಿ ಆಗ ಉಪ ವಲಯ ಅರಣ್ಯಾಧಿಕಾರಿಯಾಗಿರುವ ವಿ.ಹರೀಶ್ ಅವರು ಈ ಭಾಗದಲ್ಲಿ ನಾನೇ ಅಧಿಕಾರಿಯಾಗಿದ್ದು, ನಾನಿರುವಾಗ ಯಾವುದೇ ಅನುಮತಿ ಬೇಡ ಅದಕ್ಕಾಗಿ ೫೦೦೦ ರೂ ಕೊಟ್ಟು ಹೋಗಿ ನಾನು ನೋಡಿಕೊಳ್ಳುತ್ತೇನೆ ಎಂದು ನಗರದ ಶ್ರೀನಿವಾಸಪುರ ವೃತ್ತದ ಟೋಲ್‌ಗೇಟ್ ಬಳಿಯಿರುವ ಟೀ ಅಂಗಡಿ ಬಳಿ ಹಣ ಪಡೆದಿದ್ದಾರೆ.
ಇದಾದ ೨ ದಿನಗಳ ನಂತರ ವ್ಯಾಪಾರಿ ಮುನಿಶಾಮಿ ಆ, ೨೨ ರಂದು ಮರ ಕಟಾವು ಮಾಡಿ ಅದರ ತುಂಡುಗಳನ್ನು ಕೆಎ-೦೭ ಟಿಬಿ ೧೦೩೧ ಸಂಖ್ಯೆಯ ಟ್ರಾಕ್ಟರ್‌ನಲ್ಲಿ ತುಂಬಿಸಿಕೊಂಡು, ನಗರ ಹೊರವಲಯದ ಅಗ್ನಿಶಾಮಕ ಠಾಣೆಯ ಬಳಿ ಬರುವಾಗ ಅಡ್ಡಗಟ್ಟಿದ ಅರಣ್ಯಾಧಿಕಾರಿ ಹರೀಶ್ ಹಾಗೂ ನೆಡುತೋಪು ಕಾವಲುಗಾರ ಟಿ.ವಿ.ರಾಜೇಶ್ ಅವರು ಟ್ರಾಕ್ಟರ್‌ನ್ನು ಜಪ್ತಿ ಮಾಡುತ್ತಿರುವುದಾಗಿ ಹೆದರಿಸಿ ಅದನ್ನು ನಗರದ ಕ್ಲಾಕ್ ಟವರ್ ಬಳಿಯ ನಗರ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ತಂದು ನಿಲ್ಲಿಸಲಾಗುತ್ತದೆ.
ವಾಹನ ಹಾಗೂ ಮಾಲು ಸಮೇತ ನೀನು ಸಿಕ್ಕಿ ಬಿದ್ದಿದ್ದು ಫಾರೆಸ್ಟ್ ಕೇಸ್ ಆಕ್ಟ್ ಅನ್ವಯ ಪ್ರಕರಣ ದಾಖಲಿಸಿದರೆ ವಾಹನ ಹಾಗೂ ಮಾಲು ಜಪ್ತಿ ಮಾಡಿದರೆ ಅದು ಬಿಡುಗಡೆಯಾಗುವುದಿಲ್ಲ ಹಾಗೂ ನೀನು ಬೇಲ್ ಸಿಗದೆ ಜೈಲಿನಲ್ಲಿ ಇರಬೇಕಾಗುತ್ತದೆ ಎಂದು ಹೆದರಿಸಲಾಗುತ್ತದೆ. ಆಗ ವ್ಯಾಪಾರಿ ಪರಿಪರಿಯಾಗಿ ಬೇಡಿಕೊಂಡಾಗ ೪೫ ಸಾವಿರ ರೂ ಕೊಟ್ಟರೆ ವಾಹನ ಬಿಡುಗಡೆ ಮಾಡುವುದಾಗಿ ಹೇಳಲಾಗುತ್ತದೆ ಅದರಂತೆ ವ್ಯಾಪಾರಿ ಮುನಿಶಾಮಿ ತಮ್ಮ ಫೋನ್ ಫೇ ಮೂಲಕ ೩೫ ಸಾವಿರ ರೂಗಳನ್ನು ವಾಚರ್ ರಾಜೇಶ್‌ಗೆ ಪಾವತಿಸಿದ್ದು ಉಳಿಕೆ ೧೦,೦೦೦ ರೂಗಳನ್ನು ನಗದು ರೂಪದಲ್ಲಿ ನೀಡಿರುತ್ತಾರೆ. ಆ ನಂತರ ರಾಜೇಶ್ ಅರಣ್ಯಾಧಿಕಾರಿಗೆ ಯಥಾಪ್ರಕಾರ ೪೫ ಸಾವಿರ ರೂಗಳನ್ನು ಪಾವತಿಸಿದ್ದಾರೆ.
ಅರಣ್ಯಾಧಿಕಾರಿ ಒತ್ತಡಕ್ಕೆ ಮಣಿದ ಮರದ ವ್ಯಾಪಾರಿ ಉಲ್ಟಾ ಹೊಡೆದ ಹಿನ್ನಲೆಯಲ್ಲಿ ಟ್ರಾಕ್ಟರ್ ಜಪ್ತಿ ಮಾಡಿರುವುದಾಗಿ ಹೇಳಿ ಕೋಲಾರ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಆವರಣದಲ್ಲಿ ನಿಲ್ಲಿಕೊಂಡಿದ್ದಾದರೂ ಹೇಗೆ ? ಜಪ್ತಿ ಮಾಡಿದ್ದಲ್ಲಿ ಪ್ರಕರಣ ದಾಖಲಿಸಿದ, ದಂಡ ಹಾಕಿದ ಹಾಗೂ ಸಿ.ಸಿ.ಕ್ಯಾಮೆರಾ ಪುಟೇಜ್ ವಿವರ ನೀಡಬೇಕೆಂದು ರೈತ ಸಂಘದ ಮುಖಂಡ ಕೋಟಿಗಾನಹಳ್ಳಿ ಗಣೇಶ್‌ಗೌಡ ಅವರು ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮದ ಮೂಲಕ ಸಾರ್ವಜನಿಕ ಹಿತಾಸಕ್ತಿ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.


























