ಜೀ ರಾಮ್‌ಜಿ ಕಾಯ್ದೆ ರದ್ದತಿಗೆ ಆಗ್ರಹ

ಬೆಂಗಳೂರು,ಜ೩:ಮಹಾತ್ಮಗಾಂಧಿ ನರೇಗಾ ಯೋಜನೆಯ ಹೆಸರು, ಸ್ವರೂಪ ಬದಲಾವಣೆಯನ್ನು ಪ್ರಬಲವಾಗಿ ವಿರೋಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಹಳ್ಳಿ ಅಧಿಕಾರ ಕಸಿದುಕೊಂಡು ಗ್ರಾಮೀಣ ಆರ್ಥಿಕತೆಯನ್ನು ನಾಶಪಡಿಸಲು ಮುಂದಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.


ಈ ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮಗಾಂಧಿ ನರೇಗಾ ಯೋಜನೆ ಜನರಿಗೆ ಉದ್ಯೋಗದ ಹಕ್ಕನ್ನು ನೀಡಿತ್ತು. ಈ ಹಕ್ಕನ್ನು ಈಗ ಕಿತ್ತುಕೊಳ್ಳಲಾಗಿದೆ. ಇದು ಸರಿಯಲ್ಲ. ಮನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸುವಂತೆ ಆಗ್ರಹಿಸಿದ ಅವರು, ಮನರೇಗಾ ಯೋಜನೆಯನ್ನು ಮೊದಲಿನ ಸ್ವರೂಪದಲ್ಲೇ ಮರುಸ್ಥಾಪಿಸುವಂತೆ ಆಗ್ರಹಿಸಿ ನಾವು ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.


ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಹಿಂಪಡೆದು ವೀಬಿ ಜಿ ರಾಮ್ ಜಿ ಹೆಸರಿನಲ್ಲಿ ಹೊಸ ಕಾಯ್ದೆ ಜಾರಿಗೆ ತರುವ ಮುನ್ನ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿಲ್ಲ. ಯಾವ ಅಭಿಪ್ರಾಯವನ್ನು ಪಡೆಯದೇ ನೇರವಾಗಿ ಹೊಸ ಕಾಯ್ದೆ ಜಾರಿಗೊಳಿಸುವ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ ಎಂದು ದೂರಿದರು.


ಕೇಂದ್ರ ಸರ್ಕಾರದ ಈ ನಡೆಯ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿದೆ. ಮನರೇಗಾ ಯೋಜನೆಯನ್ನು ಮರು ಸ್ಥಾಪಿಸುವವರೆಗೂ ನಾವು ಹೋರಾಟ ನಡೆಸುತ್ತೇವೆ. ರೈತರ ಹೋರಾಟದಂತೆಯೇ ನಾವು ಹೋರಾಟ ಮಾಡುತ್ತೇವೆ. ಯಾರು ಬೇಕಾದರೂ ನಮ್ಮ ಜತೆ ಹೋರಾಟಕ್ಕೆ ಸೇರ್ಪಡೆಯಾಗಬಹುದು. ಸಂಘ ಸಂಸ್ಥೆಗಳು, ಪಕ್ಷಗಳು ಎಲ್ಲರೂ ನಮ್ಮ ಹೋರಾಟದಲ್ಲಿ ಭಾಗಿಯಾಗಬಹುದು ಎಂದರು.


ವೀಬಿ ಜಿ ರಾಮ್ ಜಿ ಕಾಯ್ದೆ ವಾಪಸ್ ಪಡೆದು ಮನರೇಗಾ ಯೋಜನೆಯನ್ನು ಮೊದಲಿನ ರೂಪದಲ್ಲೇ ಸ್ಥಾಪಿಸಬೇಕು. ಅಲ್ಲಿಯವರೆಗೂ ನಾವು ಹೋರಾಟ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


ಆರ್‌ಎಸ್‌ಎಸ್ ಕೈವಾಡ


ಮನರೇಗಾ ಯೋಜನೆಯನ್ನು ಬದಲಿಸುವುದರ ಹಿಂದೆ ಆರ್‌ಎಸ್‌ಎಸ್‌ನ ಕೈವಾಡವಿದೆ. ಎಂದು ಅವರು ದೂರಿದರು.
ಮನುಸ್ಮೃತಿಯಿಂದ ಪ್ರೇರಣೆ ಪಡೆದಿರುವ ಆರ್‌ಎಸ್‌ಎಸ್‌ನವರಿಗೆ ಮಹಿಳೆಯರು, ದಲಿತರ ಕೈಯಲ್ಲಿ ಹಣ ಇರಬಾರದು. ಅವರು ಸ್ವಾಭಿಮಾನದಿಂದ ಬದುಕಬಾರದು ಅಂತ ಇದೆ. ಹಾಗಾಗಿಯೇ ಅವರು ಬಿಜೆಪಿ ಸರ್ಕಾರದ ಮೂಲಕ ವೀಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.


ಮನರೇಗಾ ಕಾಯ್ದೆಯನ್ನು ಮೊದಲಿನಂತೆಯೇ ಮರು ಸ್ಥಾಪಿಸಬೇಕು. ವೀಬಿ ಜಿ ರಾಮ್ ಜಿ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ನಾನು ಈಗಾಗಲೇ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ ಅವರು, ಮಹಾತ್ಮಗಾಂಧೀಜಿಯವರು ಗ್ರಾಮ ಸ್ವರಾಜ್‌ನ ಕನಸು ಕಂಡಿದ್ದರು. ಅದನ್ನು ನನಸು ಮಾಡುವುದಕ್ಕೆ ಮನರೇಗಾ ಹೆಜ್ಜೆಯಾಗಿತ್ತು. ಗಾಂಧಿಯನ್ನು ಗೋಡ್ಸೆ ಕೊಂದು ಹಾಕಿದ್ದರು. ಈಗ ಗಾಂಧೀಜಿ ಹೆಸರನ್ನು ಬದಲಾಯಿಸಿ ೨ನೇ ಬಾರಿ ಬಿಜೆಪಿಯವರು ಗಾಂಧೀಜಿಯವರನ್ನು ಕೊಂದು ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.


ನರೇಗಾ ಕಾಯ್ದೆ ಪ್ರಕಾರ ಜನಸಮಾನ್ಯರು, ಕೂಲಿ ಕಾರ್ಮಿಕರು ಕೃಷಿ ಕಾರ್ಯಗಳ ಜತೆಯಲ್ಲಿ ತಾವಿದ್ದ ಸ್ಥಳದಲ್ಲೇ ನರೇಗಾ ಅಡಿ ಕೂಲಿ ಕೆಲಸ ಮಾಡಲು ಅವಕಾಶ ಇತ್ತು. ಆ ಮೂಲಕ ಹಳ್ಳಿಗಾಡಿನ ಆರ್ಥಿಕತೆ ಕಟ್ಟಲು ಸಾಧ್ಯವಾಗಿತ್ತು. ಸ್ಥಳೀಯವಾಗಿ ಆಸ್ತಿ ಸೃಜನೆಯಾಗುತ್ತಿತ್ತು. ಉದ್ಯೋಗ ಕೇಳಿ ಪಡೆಯುವ ಹಕ್ಕು ಜನರಿಗಿತ್ತು. ಹೊಸ ಕಾಯ್ದೆ ಪ್ರಕಾರ ಈಗ ಇದ್ಯಾವುದೂ ಇಲ್ಲವಾಗಿದೆ ಎಂದರು.


ಮನರೇಗಾ ಕಾಯ್ದೆಯಡಿ ಕನಿಷ್ಠ ೧೦೦ ದಿನ ಕೆಲಸ ನೀಡಬೇಕಿತ್ತು. ಅವರು ಎಲ್ಲಿ ವಾಸಿಸುತ್ತಾರೋ ಅಲ್ಲಿಯೇ ಕೆಲಸ ನೀಡಬೇಕಿತ್ತು. ಈಗ ಹೊಸ ಕಾಯ್ದೆ ಪ್ರಕಾರ ಸರ್ಕಾರ ಅಧಿಸೂಚಿತ ಪ್ರದೇಶದಲ್ಲಿ ಮಾತ್ರ ಉದ್ಯೋಗ ನೀಡಲಾಗುತ್ತದೆ. ಉದ್ಯೋಗ ದೊರೆಯುವ ಬಗ್ಗೆ ಯಾವುದೇ ಗ್ರಾಮ ಪಂಚಾಯ್ತಿಗಳಿಗೂ ಖಾತ್ರಿ ಇರುವುದಿಲ್ಲ ಎಂದರು.
ಗ್ರಾಮ ಪಂಚಾಯ್ತಿಗಳಿಗೆ ಇದ್ದ ಅಧಿಕಾರವನ್ನು ಇದೀಗ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಇದು ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಅವರು ಪುನರುಚ್ಚರಿಸಿದರು.


ಹಳೇ ನರೇಗಾ ಕಾಯ್ದೆಯನ್ನೆ ಜಾರಿಗೊಳಿಸಿ ದಲಿತರು, ಮಹಿಳೆಯರ ಉದ್ಯೋಗದ ಹಕ್ಕನ್ನು ಪುನರ್ ಸ್ಥಾಪಿಸಬೇಕು. ಜತೆಗೆ ಪಂಚಾಯ್ತಿಗಳ ಸ್ವಯಂ ಆಡಳಿತದ ಹಕ್ಕನ್ನು ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.


ಹೊಸ ಕಾಯ್ದೆ ಮೂಲಕ ಗ್ರಾಮೀಣ ಜನರ ಹಕ್ಕನ್ನು ಕಸಿಯಲಾಗುತ್ತಿದೆ. ರಾಜ್ಯ ಸರ್ಕಾರಗಳ ಜತೆ ಚರ್ಚೆ ಮಾಡದೆ ರಾಜ್ಯಗಳ ಬಜೆಟ್ ಮೇಲೆ ಹೆಚ್ಚಿನ ಹೊರೆಯನ್ನು ಸಂವಿಧಾನ ಬಾಹಿರವಾಗಿ ಹೇರಲಾಗುತ್ತಿದೆ ಎಂದರು.


ಈ ಹಿಂದೆ ನರೇಗಾ ಯೋಜನೆಯಡಿ ಶೇ. ೧೦೦ ರಷ್ಟು ಹಣವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಈಗ ಶೇ. ೪೦ ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಈ ಕಾಯ್ದೆಯ ವ್ಯತ್ಯಾಸ, ದೋಷಗಳ ಬಗ್ಗೆ ನಾವು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಉದ್ಯೋಗದ ಹಕ್ಕು, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು ಮೊದಲಾದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ಹೆಚ್ಚಿನ ಅಧಿಕಾರ ನೀಡುವ ಕೆಲಸ ಮಾಡಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮನಮೋಹನ್‌ಸಿಂಗ್ ರವರ ಜನಪರ ಕಾಯ್ದೆಯನ್ನು ಹಿಂಪಡೆಯುವ ಮೂಲಕ ಕಾರ್ಪೋರೇಟ್ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಕೆಲಸ ಮಾಡುತ್ತಿದೆ ಎಂದು ದೂರಿದರು.


ಕಳೆದ ೧೧ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಾಧನೆ ಎಂದರೆ ಯುಪಿಎ ಸರ್ಕಾರ ಜಾರಿ ಮಾಡಿದ್ದ ಯೋಜನೆಗಳ ಹೆಸರು ಬದಲಾಯಿಸಿರುವುದು ಮಾತ್ರ. ಹಿಂದೆ ಜಾರಿಯಲ್ಲಿದ್ದ ಸುಮಾರು ೩೦ ಯೋಜನೆಗಳ ಹೆಸರು ಬದಲಾವಣೆ ಅಥವಾ ಕಾಯ್ದೆಗಳನ್ನು ಹಿಂಪಡೆಯುವ ಕಾರ್ಯವನ್ನು ಮೋದಿ ಸರ್ಕಾರ ಮಾಡಿದೆ ಎಂದು ಹರಿಹಾಯ್ದರು.


ವರ್ಷದ ಯಾವುದೇ ಅವಧಿಯಲ್ಲಿ ಲಭ್ಯವಾಗುತ್ತಿದ್ದ ಕೂಲಿ ಕೆಲಸವನ್ನು ಈಗ ನಿರ್ಬಂಧಿಸಲಾಗಿದ್ದು, ಕೃಷಿ ಚಟುವಟಿಕೆಯ ಅವಧಿಯ ೬೦ ದಿನ ಯೋಜನೆಯಡಿ ಯಾವುದೇ ಉದ್ಯೋಗ ನೀಡಲಾಗುವುದಿಲ್ಲ. ಹಣದುಬ್ಬರಕ್ಕೆ ತಕ್ಕಂತೆ ಕೂಲಿ ಹಣವನ್ನು ಸರಿದೂಗಿಸುವ ಅವಕಾಶವನ್ನು ಹೊಸ ಕಾಯ್ದೆಯಲ್ಲಿ ತೆಗೆದು ಹಾಕಲಾಗಿದೆ. ಜತೆಗೆ ರಾಜ್ಯ ಸರ್ಕಾರ ಹೊಸ ಕಾಯ್ದೆ ಪ್ರಕಾರ ಶೇ. ೪೦ ರಷ್ಟು ಹಣವನ್ನು ಭರಿಸಬೇಕಾಗುತ್ತದೆ. ಇದು ರಾಜ್ಯಗಳ ಮೇಲೆ ಹಣಕಾಸು ಹೊರೆಯನ್ನು ಹೆಚ್ಚಿಸಲಿದೆ ಎಂದು ಹೇಳಿದರು.


ಹೊಸ ಕಾಯ್ದೆಯಿಂದ ನಿರುದ್ಯೋಗ ಹೆಚ್ಚಳ, ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆ, ದಲಿತ ಹಾಗೂ ಆದಿವಾಸಿ ಕುಟುಂಬಗಳ ಮೇಲೆ ಹೆಚ್ಚಿನ ಒತ್ತಡ ಸೃಷ್ಠಿಯಾಗಿ ಗ್ರಾಮೀಣ ಜೀವನೋಪಾಯಗಳ ಕುಸಿತದಿಂದ ಗ್ರಾಮೀಣರ ಬದುಕು ದುಸ್ತರಗೊಳ್ಳಲಿದೆ. ಪಂಚಾಯ್ತಿಗಳು ಕೇವಲ ಅನುಷ್ಠಾನ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವಂತಾಗುತ್ತವೆ. ಈ ಮೂಲಕ ಗುತ್ತಿಗೆದಾರರಿಗೆ ಹೆಚ್ಚಿನ ಅವಕಾಶ ಸೃಷ್ಠಿಸಲಾಗುತ್ತದೆ ಎಂದು ಅವರು ಹೇಳಿದರು.


ಈ ಹೊಸ ಕಾಯ್ದೆಯ ಹಿಂದೆ ಆರ್‌ಎಸ್‌ಎಸ್ ಇದೆ ಎಂದು ಪುನರುಚ್ಚರಿಸಿದ ಅವರು, ೨೦ ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸಿದ ಸಂದರ್ಭದಲ್ಲೇ ಬಿಜೆಪಿ ಈ ಯೋಜನೆಯನ್ನು ವಿರೋಧಿಸಿತ್ತು. ಆಹಾರ ಭದ್ರತಾ ಕಾಯ್ದೆಯನ್ನು ಸಹ ಗೇಲಿ ಮಾಡಿತ್ತು. ಜನಪರವಾದ ಕಾನೂನುಗಳನ್ನು ನಾಶ ಮಾಡುವುದೇ ಬಿಜೆಪಿಯ ಕೆಲಸ ಎಂದು ದೂರಿದರು.


ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಇವರುಗಳು ಉಪಸ್ಥಿತರಿದ್ದರು.