ಕೋಲಾರ,ಅ.೧೬- ಕೋಲಾರ ಬೇತಮಂಗಲ ಮುಖ್ಯರಸ್ತೆಯ ಗಂಗಾಪುರ ಗೇಟ್‌ನಿಂದ ಪಟ್ನ ಗೇಟ್‌ವರೆಗೂ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಸುಮಾರು ಐದಾರು ವರ್ಷಗಳಿಂದ ಈ ರಸ್ತೆಯನ್ನು ದುರಸ್ಥಿಪಡಿಸಿಕೊಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಶಾಸಕರ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ. ಅಧಿಕಾರಿಗಳು ಮಾತ್ರ ನೆಪಮಾತ್ರಕ್ಕೆ ಇವತ್ತು, ನಾಳೆ ರಸ್ತೆಯನ್ನು ಸರಿಪಡಿಸುತ್ತೇವೆ ಎಂದು ಪೊಳ್ಳೂ ಆಶ್ವಾಸನೆಗಳು ನೀಡುತ್ತಾ ಬರುತ್ತಿರುವುದು ಖಂಡನೀಯ ಎಂದು ನಮ್ಮ ಕೋಲಾರ ರೈತ ಸಂಘ ಸಂಸ್ಥಾಪಕ ಅಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೋಟಿಗಾನಹಳ್ಳಿ ಗಣೇಶ್‌ಗೌಡ, ಕೋಲಾರ ಬೇತಮಂಗಲ ರಸ್ತೆಯು ರಾಜ್ಯ ಹೆದ್ದಾರಿಯಾಗಿದೆ. ಈ ರಸ್ತೆಯ ಮೂಲಕ ನೆರೆಯ ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಗಂಗಾಪುರ ಗೇಟ್‌ನಿಂದ ಪಟ್ನ ಗೇಟ್‌ವರೆಗೂ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಗುಂಡಿಗಳು ಬಿದ್ದಿವೆ. ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿ ಅಂಗವಿಕಲರಾಗಿರುವ ಘಟನೆಗಳು ಕಣ್ಣ ಮುಂದೆ ಇವೆ. ಈ ವಿಚಾರವಾಗಿ ನಮ್ಮ ಸಂಘಟನೆ ವತಿಯಿಂದ ಸಂಬಂಧಪಟ್ಟ ಶಾಸಕರು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಆರೋಪಿಸಿದರು.
ಇನ್ನೂ ೧೫ ದಿವಸದೊಳಗೆ ಹದಗೆಟ್ಟಿರುವ ರಸ್ತೆಯನ್ನು ದುರಸ್ಥಿಗೊಳಿಸದೇ ಹೋದರೆ ಹುತ್ತೂರು ಹೋಬಳಿಯ ರೈತರು ಹಾಗೂ ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರೊಟ್ಟಿಗೆ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ನಮ್ಮ ಕೋಲಾರ ರೈತ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಕೆಂಬೋಡಿ ಕೃಷ್ಣೇಗೌಡ, ಜಿಲ್ಲಾ ಉಪಾಧ್ಯಕ್ಷ ಯಲವಾರ ವಿಶ್ವನಾಥ್, ಕೋಲಾರ ತಾಲ್ಲೂಕು ಅಧ್ಯಕ್ಷ ಅಗ್ರಹಾರಸೋಮರಸನಹಳ್ಳಿ ನಾರಾಯಣಸ್ವಾಮಿ, ಅಬ್ಬಣಿ ಮುನೇಗೌಡ, ನಾರಾಯಣಸ್ವಾಮಿ, ನಾರಾಯಣಪ್ಪ, ರವಿ, ತಮ್ಮೇಗೌಡ ಮತ್ತಿತರರು ಹಾಜರಿದ್ದರು.




























