ಔರಾದ: ತಾಲ್ಲೂಕಿನ ಹಂಗರಗಾ-ಸಾವರಗಾAವ ಹಾಗೂ ಏಕಂಬಾ-ಲಿAಗಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಲ್ಲಿ ಗುಣಮಟ್ಟ ಕಳಪೆಯಾಗಿದೆ ತಾಂತ್ರಿಕ ಮಾನದಂಡಗಳನ್ನು ಪಾಲಿಸಲಾಗಿದೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸುವಂತೆ ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿಯ ತಾಲ್ಲೂಕು ಉಪಾಧ್ಯಕ್ಷರಾದ ಸಂತೋಷ ಸೂರ್ಯವಂಶಿ ಅವರು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.
ಮೇಲ್ಕಂಡ ರಸ್ತೆ ಕಾಮಗಾರಿಗಳಲ್ಲಿ ಹಳೆಯ ರಸ್ತೆಯನ್ನು ಅಗತ್ಯವಿರುವ ರೀತಿಯಲ್ಲಿ ತೆರವುಗೊಳಿಸದೆ ಅದರ ಮೇಲೆಯೇ ಹೊಸ ರಸ್ತೆ ನಿರ್ಮಿಸುತ್ತಿರುವುದು ಹಾಗೂ ರಸ್ತೆ ಮೇಲ್ಮೈಯಲ್ಲಿ ಜಲ್ಲಿ ಕಲ್ಲುಗಳು ಸಡಿಲಗೊಳ್ಳುತ್ತಿರುವ ಕುರಿತು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸೇತುವೆ ನಿರ್ಮಾಣದಲ್ಲಿ ಅನುಮೋದಿತ ವಿನ್ಯಾಸದ ಪ್ರಕಾರ ಉಕ್ಕಿನ ಬಲವರ್ಧಕ ಕಂಬಿಗಳು ಮತ್ತು ಗುಣಮಟ್ಟದ ನಿರ್ಮಾಣ ಸಾಮಗ್ರಿಗಳನ್ನು ಬಳಸಲಾಗಿದೆಯೇ ಎಂಬುದರ ಬಗ್ಗೆಯೂ ತಾಂತ್ರಿಕ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ದೂರು ಸಲ್ಲಿಸಲಾಗಿದ್ದು, ಕಾಮಗಾರಿಗಳಲ್ಲಿನ ಲೋಪಗಳ ಕುರಿತು ಜಿಪಿಎಸ್ ಫೋಟೋಗಳನ್ನು ಅಧಿಕಾರಿಗಳಿಗೆ ತೋರಿಸಿದ ಬಳಿಕ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಂಬAಧಪಟ್ಟ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸಂತೋಷ ಸೂರ್ಯವಂಶಿ ತಿಳಿಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾಗುವ ರಸ್ತೆ ಮತ್ತು ಸೇತುವೆಗಳು ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿಗಳಲ್ಲಿ ಯಾವುದೇ ಲೋಪಗಳಿದ್ದರೆ ಅವುಗಳನ್ನು ನಿರ್ಲಕ್ಷಿಸದೆ, ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿಸಬೇಕು. ಜೊತೆಗೆ, ಕಳಪೆ ಕಾಮಗಾರಿ ದೃಢಪಟ್ಟಲ್ಲಿ ಅಗತ್ಯ ದುರಸ್ತಿ ಅಥವಾ ಮರುಕಾಮಗಾರಿ ಮಾಡಿಸಿ, ಕೈಗೊಂಡ ಕ್ರಮಗಳ ಕುರಿತು ಲಿಖಿತ ಮಾಹಿತಿ ನೀಡಬೇಕು ಎಂದು ಸಂತೋಷ ಸೂರ್ಯವಂಶಿ ಒತ್ತಾಯಿಸಿದ್ದಾರೆ.



















