ಮಧುಗಿರಿ, ಆ. ೨೦- ತಾಲ್ಲೂಕಿನ ಆರ್ಯವೈಶ್ಯ ಜನಾಂಗದವರು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣನವರನ್ನು ಸದಾ ಕಾಲವು ಬೆಂಬಲಿಸುವುದಾಗಿ ಸಮುದಾಯದ ಮುಖಂಡ ಕೆ.ಎನ್. ಶ್ರೀನಿವಾಸಮೂರ್ತಿ ತಿಳಿಸಿದರು.
ಮಧುಗಿರಿಯ ನಿರೀಕ್ಷಣಾ ಮಂದಿರದಲ್ಲಿ ಆರ್ಯ ವೈಶ್ಯ ಜನಾಂಗದ ಮುಖಂಡರುಗಳೊಂದಿಗೆ ಆಗಮಿಸಿ ಶಾಸಕ ಕೆ.ಎನ್. ರಾಜಣ್ಣನವರನ್ನು ಮತ್ತೆ ಸಚಿವರನ್ನಾಗಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದೆಹಲಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ರವರಿಗೆ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ನಮ್ಮ ಸಮುದಾಯದವರು ಮಧುಗಿರಿಯಲ್ಲಿ ಪಕ್ಷಭೇದ ಮರೆತು ಕೆ.ಎನ್. ರಾಜಣ್ಣನವರನ್ನು ಸದಾ ಕಾಲವು ಬೆಂಬಲಿಸುತ್ತಾ ಬಂದಿದ್ದೇವೆ. ಇವರು ಮಧುಗಿರಿ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವುದು, ವಿಶ್ವ ಭೂಪಟದಲ್ಲಿ ಮಧುಗಿರಿಯನ್ನು ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಮಾಡಿಸುವ ಮೂಲಕ ಪರಿಚಯಿಸುತ್ತಿರುವುದು, ಜತೆಗೆ ಕಂದಾಯ ಜಿಲ್ಲಾ ಕೇಂದ್ರವನ್ನಾಗಿಸುವ ಇವರ ಶ್ರಮಕ್ಕೆ ಸದಾಕಾಲವೂ ಬೆಂಬಲವಾಗಿರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಜನಾಂಗದ ಮುಖಂಡರುಗಳಾದ ಎಂ.ಎಸ್. ರಘುನಾಥ್, ಕೆ.ಎಂ. ವಿಕ್ರಮ್, ಕೆ.ಎಂ. ಮಧು, ಆದರ್ಶ್, ದಿವಾಕರ್, ಕಿಶೋರ್, ಮಹೇಶ್, ಕಾರ್ತಿಕ್, ಸ್ಕಂದಕುಮಾರ್, ಭರತ್, ಪ್ರಕಾಶ್, ನವೀನ್, ಬಾಲಾಜಿ ಮತ್ತಿತರರು ಉಪಸ್ಥಿತರಿದ್ದರು.




























