Home ಜಿಲ್ಲೆ ಕಲಬುರಗಿ ಕನಿಷ್ಠ ವೇತನ ರೂ.35 ಸಾವಿರಕ್ಕೆ ಹೆಚ್ಚಳಕ್ಕೆ ಆಗ್ರಹ

ಕನಿಷ್ಠ ವೇತನ ರೂ.35 ಸಾವಿರಕ್ಕೆ ಹೆಚ್ಚಳಕ್ಕೆ ಆಗ್ರಹ

ಕಲಬುರಗಿ:ಮೇ.2: 140ನೇ ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಲಬುರಗಿ ನಗರದ ನೀರು ಸರಬರಾಜು, ಪೌರ ಕಾರ್ಮಿಕ ಹಾಗೂ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಸಂಘದ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಮುಖಂಡ ಸುನಿಲ ಮಾನಪಡೆ ಮಾತನಾಡಿ, ದೇಶದ ದುಡಿಯುವ ವರ್ಗದ ಕಾರ್ಮಿಕರಿಗೆ ಬೆಲೆ ಏರಿಕೆ, ಮಾನವ ಆರ್ಥಿಕ ಸೂಚ್ಯಂಕ ಹಾಗೂ ಆರ್ಥಿಕ ಬೆಳವಣಿಗೆಯನ್ನು ಆಧಾರವಾಗಿಟ್ಟುಕೊಂಡು ದುಡಿಮೆಯ ಕೂಲಿಯನ್ನು ಹೆಚ್ಚಿಸಿ ಕನಿಷ್ಠ ವೇತನವನ್ನು ರೂ.35 ಸಾವಿರಕ್ಕೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಹೊಸ ಕಾರ್ಮಿಕ ಕಾಯ್ದೆಗಳಡಿ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸುವುದು, 300ಕ್ಕಿಂತ ಕಡಿಮೆ ಕಾರ್ಮಿಕರಿರುವ ಕಂಪನಿಗಳು ಯಾವುದೇ ಮುನ್ಸೂಚನೆ ನೀಡದೆ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುವ ಅವಕಾಶ, ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ನಿಬರ್ಂಧ, ಹೆಚ್ಚಿನ ಪಿಎಫ್ ಕಡಿತ ಹಾಗೂ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ನೇಮಿಸುವಂತಹ ನೀತಿಗಳು ಕಾರ್ಮಿಕರ ಶೋಷಣೆಗೆ ಕಾರಣವಾಗಲಿವೆ. ಆದ್ದರಿಂದ ಸಂಘಟಿತ ಹೋರಾಟ ಅನಿವಾರ್ಯ ಎಂದು ಹೇಳಿದರು.
ಸರ್ಕಾರಗಳು ಗ್ಯಾರಂಟಿ ಯೋಜನೆಗಳಿಗಿಂತ ಯುವಜನತೆಗೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಸರ್ಕಾರದ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಖಾಯಂ ಉದ್ಯೋಗ ನೀಡಬೇಕು. ವಿದೇಶಿ ಹಾಗೂ ದೇಶಿ ಖಾಸಗಿ ಕಂಪನಿಗಳಲ್ಲಿ ಸ್ಥಳೀಯರು ಮತ್ತು ಕನ್ನಡಿಗರಿಗೆ ಉದ್ಯೋಗ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನೋರ್ವ ಜಿಲ್ಲಾ ಕಾರ್ಮಿಕ ಮುಖಂಡ ಚಂದು ಜಾಧವ ಮಾತನಾಡಿ, 1886ರ ಮೇ ತಿಂಗಳಲ್ಲಿ ಸಿಕಾಗೋ ನಗರದಲ್ಲಿ ಎಂಟು ಗಂಟೆಗಳ ಕೆಲಸದ ಅವಧಿ ನಿಗದಿಪಡಿಸಬೇಕೆಂದು ಹೋರಾಟ ನಡೆಸಿದ ನೂರಾರು ಕಾರ್ಮಿಕರ ತ್ಯಾಗದ ಫಲವಾಗಿ ಮೇ ದಿನಾಚರಣೆ ಅಸ್ತಿತ್ವಕ್ಕೆ ಬಂದಿದೆ. ಈ ದಿನವು ಕಾರ್ಮಿಕರ ಐಕ್ಯತೆ ಮತ್ತು ತ್ಯಾಗದ ಸಂಕೇತವಾಗಿದೆ ಎಂದು ಹೇಳಿದರು.
ಹಿರಿಯ ಮುಖಂಡ ನಾರಾಯಣ ರಂಗದಾಳ ಧ್ವಜಾರೋಹಣ ನೆರವೇರಿಸಿದರು. ಭಾರತ ರಾಷ್ಟ್ರೀಯ ಕಾಂಗ್ರೆಸ್ ಟ್ರೇಡ್ ಯೂನಿಯನ್ ಜಿಲ್ಲಾ ಅಧ್ಯಕ್ಷ ಅಶೋಕ ಘೊಳಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಅನಿಲ್ ಕುಮಾರ ಮಂಗಾ, ಮೈಲಾರಿ ದೊಡ್ಡಮನಿ, ಜಗನಾಥ, ಮಲ್ಲಿನಾಥ, ಪ್ರಕಾಶ ಬೇಳಗುಂಪಿ, ಸರಸ್ವತಿ ಮಠ, ಬಸಮ್ಮ, ತಾವರು ರಾಥೋಡ್, ಲತಾ ಮಾಂಗೇಶಕರ್, ಕಂಠಮ್ಮ, ಗೀತಾಬಾಯಿ, ಯುನೋಸ್ ಹಜಾರೆ, ಸಮೀರ್ ಪಾಶಾ, ಕಾಂತು ಸಿಂಗೆ, ಶಿವಕುಮಾರ ಬಬಲಾದಕರ ಸೇರಿದಂತೆ ಹಲವರು ಭಾಗವಹಿಸಿದ್ದರು.