
ಲಕ್ಷ್ಮೇಶ್ವರ,ಮೇ29: ಪಟ್ಟಣದ ಪುರಸಭೆಯ ಎದುರಿನಲ್ಲಿ ಮಂಗಳವಾರದಿಂದ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ಪುರಸಭೆ ಎಲ್ಲ ನೌಕರರು ಆರಂಭಿಸಿರುವ ಅನಿರ್ಧಿಷ್ಟಾವದಿ ಮುಷ್ಕರ ಹೋರಾಟಕ್ಕೆ ಅನೇಕ ಮುಖಂಡರು, ಮಾಜಿ ಶಾಸಕರು ಹಾಗೂ ಸಂಘದ ಜಿಲ್ಲಾ ಪ್ರತಿನಿಧಿಗಳು ಆಗಮಿಸಿ ಬೆಂಬಲ ಸೂಚಿಸಿದ್ದಾರೆ.
ಬುಧವಾರ ಸ್ಥಳಕ್ಕೆ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹಲಗಿ, ಗೌರವಾಧ್ಯಕ್ಷ ಕೆಂಚಪ್ಪ ಪೂಜಾರಿ, ಗದಗ ತಾಲೂಕ ಅಧ್ಯಕ್ಷ ಹೇಮೇಶ ಶೆಟ್ಟಿ, ವಿರುಪಾಕ್ಷಪ್ಪ ರಾಮಗೇರಿ, ನಾಗರಾಜ ಬಳ್ಳಾರಿ ಬೇಟಿ ನೀಡಿ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಮೇಶ ಹಲಗಿ ಮಾತನಾಡಿ ಸಂಘದ ವಿವಿಧ ಬೇಡಿಕೆಗಳನ್ನು ಈಡೇರಿಸವಂತೆ ಸರಕಾರಕ್ಕೆ 45 ದಿನಗಳನ್ನು ಗಡುವು ನೀಡಲಾಗಿತ್ತು,
ಅಲ್ಲಿಯವರೆಗೆ ಕಪ್ಪು ಪಟ್ಟಿ ಧರಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕೆಲಸ ಮಾಡುತ್ತ ಹೋರಾಟ ಮಾಡಿದ್ದೇವೆ, ಆದರೆ ಸರಕಾರ ಯಾವುದೇ ಹೋರಾಟಕ್ಕೂ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಇದೀಗ ಸಭೆ ಮಾಡಿ ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಹೇಳುತ್ತಿದ್ದಾರೆ, ಆದರೆ ಬೇಡಿಕೆ ಈಡೇರಿಕೆ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ನೀಡುತ್ತಿಲ್ಲ, ಪೌರ ಕಾರ್ಮಿಕರು, ಡ್ರೈವರ್, ಕ್ಲೀನರ್ಸ, ಲೋಡರ್ಸ ವಾಟರಸಪ್ಲೈ ಸೇರಿದಂತೆ ಹೊರ ಗುತ್ತಿಗೆ ಅದಾರ ಮೇಲೆ ಕೆಲಸ ಮಾಡುವ ಎಲ್ಲರನ್ನು ಸರಕಾರ ಕಾಯಂಗೊಳಿಸಬೇಕು ಹಾಗೂ ಇನ್ನಿತರ ಬೇಡಿಕೆಗಳು ಬಹುದಿನಗಳಿಂದ ಇದ್ದು ಇದರ ಬಗ್ಗೆ ಸರಕಾರ ಸ್ಪಷ್ಟ ಭರವಸೆ ನೀಡದ ಹೊರತು ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಅವರು ಯಾವುದೇ ಒತ್ತಡಕ್ಕೆ ಬೆದರಿಕೆಗೆ ಮಣಿಯುವದಿಲ್ಲ ಎಂದರು.
ಮಾಜಿ ಶಾಸಕ ರಾಮಣ್ಣ ಲಮಾಣಿ ಹೋರಾಟದ ಸ್ಥಳಕ್ಕೆ ಆಗಮಿಸಿ ಹೋರಾಟಗಾರರಿಗೆ ಬೆಂಬಲ ಸೂಚಿಸಿ ಮಾತನಾಡಿ ಮುಷ್ಕರನಿರತರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಬೇಗನೇ ಬಗೆಹರಿಸಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಸರ್ಕಾರಿ ನಿವೃತ್ತ ನೌಕರರ ಸಂಘದ ಸದಸ್ಯ ಪೂರ್ಣಾಜಿ ಖರಾಟೆ ಅವರು ಮುಷ್ಕರ ನಡೆಸುವವರಿಗೆ ಬೆಂಬಲ ಸೂಚಿಸಿ ಮಾತನಾಡಿ ಪೌರ ಕಾರ್ಮಿಕರು ಒಂದು ದಿನ ಕೆಲಸ ಮಾಡದಿದ್ದರೆ ಇಡೀ ಊರು ಗಬ್ಬೆದ್ದು ನಾರುತ್ತದೆ. ಅಲ್ಲದೆ ನೀರು ಪೂರೈಕೆದಾರರು ಇದೇ ರೀತಿ ಮುಷ್ಕರ ನಡೆಸಿದರೆ ಜನತೆಗೆ ನೀರಿನ ಸಮಸ್ಯೆ ಉಂಟಾಗಲಿದೆ. ಇಂಥ ಕೆಲಸ ಮಾಡುವವರ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಒತ್ತಾಯಿಸಿದರು. ಅದರಂತೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಸದಸ್ಯ ರಾಮಣ್ಣ ಗಡದವರ ಬೆಂಬಲ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಎನ್.ಆರ್. ಸಾತಪುತೆ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಪುರಸಭೆ ಕಚೇರಿ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ ಇದ್ದರು.