
ಕಲಬುರಗಿ,ಜ.16: ಬರುವ ಕೇಂದ್ರ ಬಜೆಟ್‍ನಲ್ಲಿ ಕಲಬುರಗಿಯಲ್ಲಿ ಏಮ್ಸ್ ಸ್ಥಾಪನೆ,ಹೆದ್ದಾರಿ ನಿರ್ಮಾಣ ಸೇರಿದಂತೆ ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿ ಜಿಲ್ಲೆಯ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕಲ್ಯಾಣ ನಾಡು ವಿಕಾಸ ವೇದಿಕೆ ಹಕ್ಕೊತ್ತಾಯ ಮಾಡಿದೆ.
ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ನಡಗೇರಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಏಮ್ಸ್ ಸ್ಥಾಪನೆಗೆ ಬೇಕಾದ ಎಲ್ಲ ಸೌಲಭ್ಯ ಕಲಬುರಗಿ ಇಎಸ್‍ಐಸಿ ಆಸ್ಪತ್ರೆ ಕಟ್ಟಡದಲ್ಲಿದೆ.ಈ ಆಸ್ಪತ್ರೆಯನ್ನು ಮೇಲುದರ್ಜೆಗೆ ಏರಿಸಿದರೆ ಕೇಂದ್ರಕ್ಕೆ ಆರ್ಥಿಕವಾಗಿ ಹೊರೆಯಾಗುವದಿಲ್ಲ ಎಂದರು.
150, 150 ಎ ಮತ್ತು 50 ರಾಷ್ಟ್ರೀಯ ಹೆದ್ದಾರಿಗಳನ್ನು ನಾಲ್ಕು ಪಥದ ಹೆದ್ದಾರಿಯಾಗಿ ಅಭಿವೃದ್ಧಿ ಮಾಡಬೇಕು.ನಗರಕ್ಕೆ ಎರಡನೆಯ ವರ್ತುಲ ರಸ್ತೆ ನಿರ್ಮಾಣ ಮಾಡಬೇಕು.ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ,ಹಾಗೂ ಕಲಬುರಗಿ ಲಾತೂರ ನಡುವಿನ ಹೊಸ ರೈಲುಮಾರ್ಗ ನಿರ್ಮಾಣಕ್ಕೆ ಅನುದಾನ ನೀಡಬೇಕು.ಕಲಬುರಗಿಗೆ ಉಡಾನ್ ಸೇವೆಯನ್ನು 10 ವರ್ಷ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಬಾಬು ಮದನಕರ,ಜೈಭೀಮ ಮಾಳಗೆ,ಮೋಹನ ಸಾಗರ,ದತ್ತು ಜಮಾದಾರ ಸೇರಿದಂತೆ ಹಲವರಿದ್ದರು.

























