ವಿಧಾನಸಭೆ ಸಚಿವಾಲಯದಲ್ಲಿ ಭ್ರಷ್ಟಾಚಾರ ತನಿಖೆಗೆ ಆಗ್ರಹ

ಬೆಂಗಳೂರು, ಅ. ೨೮- ವಿಧಾನಸಭೆ ಸಚಿವಾಲಯದಲ್ಲಿ ಆಡಳಿತ ಸುಧಾರಣೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ವಿಧಾನಸಭೆಯ ಮಾಜಿ ಅಧ್ಯಕ್ಷ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.


ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವೇಶ್ವ ಹೆಗಡೆ ಕಾಗೇರಿ ಅವರು, ಸಭಾಧ್ಯಕ್ಷ ಯು.ಟಿ. ಖಾದರ್ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ ಕರ್ನಾಟಕ ವಿಧಾನಸಭೆಗೆ ತನ್ನದೇ ಆದ ಗೌರವ ಇದೆ. ಆದರೆ ಖಾದರ್ ಅವರು ತಮ್ಮ ಪೀಠದ ಗೌರವ ಕಾಪಾಡುತ್ತಿಲ್ಲ. ಆಡಳಿತ ಸುಧಾರಣೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.


ವಿಧಾನಸೌಧದ ಸಭಾಂಗಣದ ಬಾಗಿಲಿಗೆ ಹೊಸ ರೋಸ್‌ವುಡ್ ಹಾಕಿರುವುದು, ಹೊಸ ಟಿವಿ ಖರೀದಿ, ಶಾಸಕರ ಮಸಾಜ್ ಚೇರ್, ಗಂಡ ಭೇರುಂಡ ಗಡಿಯಾರ, ಉಟ-ಉಪಹಾರ ಶಾಸಕ ಕೊಠಿಡಿಗೆ ಹಾಕಿದ ಸ್ಮಾರ್ಟ್ ಡೋರ್ ಲಾಕ್, ಸೇಫ್ಟಿ ಲಾಕರ್ ಮಾಡಿರುವ ವೆಚ್ಚದಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.


ವೈಯುಕ್ತಿಕ ದ್ವೇಷದಿಂದ ಸಭಾಧ್ಯಕ್ಷ ಖಾದರ್ ಅವರ ಮೇಲೆ ನಾನು ಆರೋಪ ಮಾಡುತ್ತಿಲ್ಲ. ಸಭಾಧ್ಯಕ್ಷ ಪೀಠದ ಗೌರವದ ಕಾರಣಕ್ಕೆ ಭ್ರಷ್ಟಾಚಾರವನ್ನು ಜನರ ಮುಂದಿಡುತ್ತಿದ್ದೇನೆ. ಸಿಬ್ಬಂದಿ ನೇಮಕ, ಪೀಠೋಪಕರಣ ಖರೀದಿ ಎಲ್ಲದರಲ್ಲೂ ಅಕ್ರಮದ ವಾಸನೆ ಬಂದಿದೆ ಎಂದರು.


ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೆ ಎಂಬ ಆರೋಪ ಮಾಡಿದ ಅವರು, ಈ ಬಗ್ಗೆ ಸಿಎಂ ಸ್ಪಷ್ಟನೆ ಕೊಡಲಿ ಎಂದು ಒತ್ತಾಯಿಸಿದರು.


ವಿಧಾನಸಭೆಯ ಎಲ್ಲ ಕಾಮಗಾರಿಗಳಿಗೆ ೪ಜಿ ವಿನಾಯ್ತಿ ತೆಗೆದುಕೊಳ್ಳಲಾಗಿದೆ. ಅಂತಹ ತುರ್ತಿನ ಅಗತ್ಯ ಏನಿತ್ತು ಎಂದು ಅವರು ಪ್ರಶ್ನಿಸಿದರು.
ವಿಧಾನಸಭಾಧ್ಯಕ್ಷರ ವಿದೇಶಿ ಅಧ್ಯಯನ ಪ್ರವಾಸದ ವಿಚಾರವೂ ಬಹಿರಂಗವಾಗಲಿ ಎಂದ ಅವರು, ವಿಧಾನಸಭಾಧ್ಯಕ್ಷರ ಸ್ಥಾನವನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕು ಎಂಬ ಆಗ್ರಹಕ್ಕೆ ನನ್ನ ಸಹಮತ ಇದೆ ಎಂದರು.


ವಿಧಾನಸಭಾ ಸಚಿವಾಲಯದಲ್ಲಿ ನಡೆದಿರುವ ಭ್ರಷ್ಟಾಚಾರದ ವಿಚಾರವನ್ನು ರಾಜ್ಯಪಾಲರ ಗಮನಕ್ಕೂ ತರುತ್ತವೆ. ರಾಜ್ಯಪಾಲರಿಗೂ ಈ ಬಗ್ಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.


ಸಭಾಧ್ಯಕ್ಷ ಯು.ಟಿ. ಖಾದರ್ ಲೂಟಿ ಖಾದರ್ ಅನ್ನುವ ಹಂತಕ್ಕೆ ತಲುಪಿದ್ದಾರೆ ಎಂದು ಜನ ಆರೋಪ ಮಾಡಿದ್ದಾರೆ. ಇದಕ್ಕೆಲ್ಲ ಖಾದರ್ ಉತ್ತರ ಕೊಡಬೇಕು. ಸವಾಲಾಗಿ ಸ್ವೀಕರಿಸಿ ಆರೋಪಗಳಿಂದ ಮುಕ್ತರಾಗಲಿ ಎಂದು ಒತ್ತಾಯಿಸಿದರು.