Home ಜಿಲ್ಲೆ ನೇರ ರಸ್ತೆ ನಿರ್ಮಿಸಲು ಒತ್ತಾಯ

ನೇರ ರಸ್ತೆ ನಿರ್ಮಿಸಲು ಒತ್ತಾಯ

ಬೀದರ್: ಇಲ್ಲಿಯ ನ್ಯೂ ಆದರ್ಶ ಕಾಲೊನಿಯ ರೈಲ್ವೆ ಕೆಳಸೇತುವೆ (ಬಚ್ಚಾ ಲೇಔಟ್) ಮೂಲಕ ವಾಯುಪಡೆ ತರಬೇತಿ ಕೇಂದ್ರದ ಮಾರ್ಗವಾಗಿ ಬೀದರ್-ಉದಗಿರ ರಸ್ತೆ ವರೆಗೆ ನೇರ ಸಂಪರ್ಕ ರಸ್ತೆ ನಿರ್ಮಿಸಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಒತ್ತಾಯಿಸಿದೆ.
ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್ ಹಾಗೂ ಕಾರ್ಯದರ್ಶಿ ಡಾ. ವೀರೇಂದ್ರ ಶಾಸ್ತ್ರಿ ಅವರು ಈ ಕುರಿತು ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಅವರಿಗೆ ಪತ್ರ ಬರೆದಿದ್ದಾರೆ.
ಸದ್ಯ ಇರುವ ಸಣ್ಣ ಸಣ್ಣ ತಿರುವುಗಳಿಂದ ಕೂಡಿದ ರಸ್ತೆ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ನೇರ ರಸ್ತೆ ನಿರ್ಮಿಸಿದರೆ ನಗರದ ಪೂರ್ವ ಭಾಗದ ನಾಗರಿಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರಿಗೆ ಅನುಕೂಲವಾಗಲಿದೆ. ನಗರದ ಸಂಚಾರ ದಟ್ಟಣೆ ಕಡಿಮೆ ಆಗಿಸುವಲ್ಲಿಯೂ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದ್ದಾರೆ.
ನೇರ ರಸ್ತೆಗೆ ಸಂಬಂಧಿಸಿದಂತೆ ಸಂಸ್ಥೆ 2014-15ನೇ ಸಾಲಿನಿಂದ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ಪತ್ರ ಬರೆಯುತ್ತ ಬಂದಿದೆ. ಈವರೆಗೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ಯೋಜನೆಯ ಅನುಷ್ಠಾನಕ್ಕಾಗಿ ಭಾರತೀಯ ವಾಯುಪಡೆಗೆ ಸೇರಿದ ಜಮೀನು ವಿನಿಮಯಕ್ಕೆ ಸಂಬಂಧಿಸಿದಂತೆ ರೂ. 45.93 ಲಕ್ಷ ಪರಿಹಾರ ಮೊತ್ತವನ್ನು ಬೀದರ್ ಮಹಾನಗರ ಪಾಲಿಕೆ ಭಾರತೀಯ ವಾಯುಪಡೆಗೆ ಪಾವತಿಸಬೇಕಾಗಿದ್ದು, ಈ ಮೊತ್ತದ ಪಾವತಿ ಬಾಕಿ ಇದೆ ಎಂದು ತಿಳಿಸಿದ್ದಾರೆ.
ಭಾರತೀಯ ವಾಯುಪಡೆಗೆ ಸಂದಾಯ ಮಾಡಬೇಕಾದ ಮೊತ್ತದ ಡಿಮ್ಯಾಂಡ್ ನೋಟ್ ಅನ್ನು ತುರ್ತಾಗಿ ರೂಪಿಸಿ, ಬೀದರ್ ಮಹಾನಗರ ಪಾಲಿಕೆಯಿಂದ ಸಲ್ಲಿಸುವಂತೆ ನಿರ್ದೇಶನ ನೀಡಬೇಕು. ನೇರ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.