
ಕಲಬುರಗಿ,ನ.11: ಟಿಪ್ಪು ಜಯಂತಿಯನ್ನು ಸರ್ಕಾರಿ ಮಟ್ಟದಲ್ಲಿ ಆಚರಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್ ಆಗ್ರಹಿಸಿದ್ದಾರೆ.
ಪ್ರಸ್ತುತ ಸರ್ಕಾರವು ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸಿರುವುದನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಅವರು ಬ್ರಿಟಿಷರ ವಿರುದ್ಧ ಧೈರ್ಯವಾಗಿ ಹೋರಾಡಿ, ಆಧುನಿಕ ಆದಾಯ ವ್ಯವಸ್ಥೆಯನ್ನು ಪರಿಚಯಿಸಿ, ವಿಶ್ವದ ಮೊದಲ ಉಕ್ಕಿನ ರಾಕೆಟ್‍ಗಳನ್ನು ಅಭಿವೃದ್ಧಿಪಡಿಸಿದರು.ಹಿಂದಿನ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಟಿಪ್ಪು ಜಯಂತಿಯನ್ನು ರಾಜ್ಯಾದ್ಯಂತ ಭವ್ಯವಾಗಿ ಆಚರಿಸಲಾಗುತ್ತಿತ್ತು. ಆದರೆ ಬಿಜೆಪಿಯ ಆಡಳಿತಕ್ಕೆ ಬಂದ ನಂತರ ಈ ಆಚರಣೆಯನ್ನು ನಿಲ್ಲಿಸಲಾಯಿತು. ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಕೂಡ ಟಿಪ್ಪು ಜಯಂತಿಯನ್ನು ಸರ್ಕಾರಿ ಮಟ್ಟದಲ್ಲಿ ಆಚರಿಸಲಾಗುತ್ತಿಲ್ಲ.ಟಿಪ್ಪು ಸುಲ್ತಾನ್ ದೇಶದ ಪ್ರತಿಯೊಬ್ಬರಿಗೂ ಸೇರಿದ್ದವರು ಅವರ ಧೈರ್ಯ, ದೇಶಭಕ್ತಿ ಮತ್ತು ತ್ಯಾಗವನ್ನು ಸಮಾನ ಗೌರವದಿಂದ ಸ್ಮರಿಸಬೇಕು ಎಂದಿದ್ದಾರೆ.






















