
ಬೀದರ್: ಮೇ.21:ಆನ್‍ಲೈನ್ ಔಷಧ ಮಾರಾಟ ಆದೇಶ ರದ್ದುಪಡಿಸಬೇಕು ಎಂದು ಆಗ್ರಹಿಸಿ ಔಷಧ ವ್ಯಾಪಾರಿಗಳು ಜಿಲ್ಲೆಯಲ್ಲಿ ಬುಧವಾರ ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಬೀದರ್ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಔಷಧಿ ಅಂಗಡಿಗಳು ಮುಚ್ಚಿದ್ದವು. ಹೀಗಾಗಿ ರೋಗಿಗಳು ಔಷಧಿಗಾಗಿ ಪರದಾಟ ನಡೆಸಿದರು.
ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ ಆಯಿಂಡ್ ಡ್ರಗ್ಗಿಸ್ಟ್ ಹಾಗೂ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ ದೇಶದಾದ್ಯಂತ ಅಂಗಡಿ ಬಂದ್‍ಗೆ ಕರೆ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ಜಿಲ್ಲೆಯಲ್ಲೂ ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಅಂಗಡಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ ಎಂದು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆನ್‍ಲೈನ್ ವೇದಿಕೆಗಳಲ್ಲಿ ಔಷಧ ಮಾರಾಟಕ್ಕೆ ಅನುಮತಿ ಕೊಟ್ಟಿತ್ತು. ಅದನ್ನು ಆ???ಲೈನ್ ವೇದಿಕೆಗಳು ಈಗಲೂ ಮುಂದುವರಿಸಿವೆ. ಅತ್ಯಧಿಕ ಡಿಸ್ಕೌಂಟ್ ಜತೆ ಆರ್ಡರ್ ಮಾಡಿದವರ ಮನೆ ಬಾಗಿಲಿಗೆ ಔಷಧ ತಲುಪಿಸುತ್ತಿವೆ. ಇದರಿಂದ ಔಷಧ ಅಂಗಡಿಗಳ ವ್ಯಾಪಾರದ ಮೇಲೆ ಭಾರಿ ಪರಿಣಾಮ ಉಂಟಾಗಿದೆ ಎಂದು ತಿಳಿಸಿದರು.
ನಿಯಮಗಳ ಪ್ರಕಾರ ಔಷಧಗಳ ಲಾಭಾಂಶ ಮಿತಿಯನ್ನು ಶೇ 16 ರಿಂದ ಶೇ 20 ರ ವರೆಗೆ ನಿಗದಿಪಡಿಸಲಾಗಿದೆ. ಆದರೆ, ಅನೇಕ ಕಾರ್ಪೋರೇಟ್ ವೇದಿಕೆಗಳು ಇದನ್ನು ಉಲ್ಲಂಘಿಸುತ್ತಿವೆ. ಅನೇಕ ಆನ್‍ಲೈನ್ ವೇದಿಕೆಗಳಲ್ಲಿ ನಕಲಿ ಔಷಧ ಮಾರಾಟವಾಗುತ್ತಿವೆ. ಆಂಟಿಬಯೋಟಿಕ್ ಔಷಧಗಳ ದುರುಪಯೋಗ ಹೆಚ್ಚುತ್ತಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ ಎಂದು ಹೇಳಿದರು.
ಕೂಡಲೇ ಆನ್‍ಲೈನ್ ಔಷಧ ಮಾರಾಟ ಆದೇಶ ಹಿಂಪಡೆಯಬೇಕು. ಕಾರ್ಪೋರೇಟ್ ಕಂಪನಿಗಳ ಅತಿಯಾದ ರಿಯಾಯಿತಿ ತಡೆಯಲು ಲೆವೆಲ್ ಪ್ಲೇಯಿಂಗ್ ಫೀಲ್ಡ್ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ರಾಜ್ಯ ಉಪಾಧ್ಯಕ್ಷ ಶಿವರಾಜ ಪಾಟೀಲ, ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ನಮೋಶಿ, ಸಹ ಕಾರ್ಯದರ್ಶಿ ಏತೆಶಾಮುಲ್ ಹಕ್, ಖಜಾಂಚಿ ಸಿದ್ಧರಾಮೇಶ್ವರ ಆನಂದೆ, ಸದಸ್ಯರಾದ ವಿಜಯಕುಮಾರ ಬಿರಾದಾರ, ಸಾಯಿಬಣ್ಣ, ಮಹಮ್ಮದ್ ಖಾಲೀದ್ ಷರೀಫ್, ಓಂರೆಡ್ಡಿ, ಪ್ರಕಾಶ್ ಪಾಟೀಲ, ಸಂತೋಷ್ ಸ್ವಾಮಿ, ದಿಲೀಪ್ ಮಹಮ್ಮದ್ ತಾಹ, ಸುರೇಶ ಬಿರಾದಾರ, ಮಾಣಿಕ ಕರಂಜೆ, ಸಂಜು ನೂಕಲವಾರ್, ಬಸವರಾಜ ಮಡಕಿ, ಮಹೇಶ ಧನವಂತ್ರಿ, ಮಹಮ್ಮದ್ ಸಮಿ ಮತ್ತಿತರರು ಇದ್ದರು.


























