ಸಮರ್ಪಕ ಬೀಜ, ಗೊಬ್ಬರ ಪೂರೈಕೆಗೆ ಆಗ್ರಹ

ಕುಂದಗೋಳ,ಮೇ.೨೪: ಕುಂದಗೋಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ರೈತರು ಮತ್ತು ಅಗ್ರೋ ಕೇಂದ್ರದ ಮಾಲೀಕರ ಸಭೆಯಲ್ಲಿ ರೈತರಿಗೆ ಬೀಜ, ಗೊಬ್ಬರ, ರಾಸಾಯನಿಕಗಳನ್ನು ಪೂರೈಸುವ ಅಗ್ರೋ ಕೇಂದ್ರಗಳು ಅಧಿಕ ಮೊತ್ತ ಪಡೆದು ಕೃಷಿ ವಸ್ತುಗಳನ್ನು ನೀಡಬಾರದು ಎಂಬ ಅನೇಕ ರೈತರ ಆಗ್ರಹ ಕೇಳಿಬಂದು ಅಗ್ರೋ ಕೇಂದ್ರದ ಮಾಲೀಕರು ಹಾಗೂ ರೈತರ ಮಧ್ಯೆ ಗೊಂದಲ-ಗದ್ದಲಗಳು ನಡೆದವು.


ರೈತರು ಆಗ್ರಹ ವ್ಯಕ್ತಪಡಿಸುತ್ತ ನಮಗೆ ಬೇಕಾದ ಗೊಬ್ಬರ ಮಾರುವಾಗ ನೀವು ನಮ್ಮಿಂದ ಹೆಚ್ಚಿನ ಹಣ ಪಡೆಯುತ್ತೀರಿ, ಅಲ್ಲದೆ ಒಂದು ವಸ್ತುವಿನೊಂದಿಗೆ ಮತ್ತೊಂದು ವಸ್ತು ನೀಡಿ ಅಧಿಕ ಹಣ ಸರಿದೂಗಿಸುತ್ತೀರಿ. ಮತ್ತು ಕಳಪೆ ಬೀಜ ಮಾರಾಟ ಮಾಡುವುದು ಸರಿಯಲ್ಲ. ಅಂತವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.


ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಎ.ಎಂ.ಕಟಗಿ ಅವರು ಮಾತನಾಡಿ ರೈತರ ನಿಲುವನ್ನು ಅರ್ಥ ಮಾಡಿಕೊಂಡು ಸಾಗೋಣ, ನಿಮ್ಮ ಕಷ್ಟ-ನಷ್ಟ ಕುರಿತು ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದರು.
ನವದೆಹಲಿ ರತ್ನ ಭಾರತ ಸಮಾಜ ಅಧ್ಯಕ್ಷ ಹೇಮನಗೌಡ ಬಸವನಗೌಡ್ರ ಮಾತನಾಡಿ ನಿಮಗೆ ನಷ್ಟ ಆಗುವುದಾದರೆ ಸರ್ಕಾರದೊಂದಿಗೆ ಮಾತನಾಡಿಕೊಳ್ಳಿರಿ. ಆದರೆ ನಮ್ಮ ರೈತರಿಗೆ ಯಾವುದೇ ರೀತಿ ಹೊರೆಯಾಗಬಾರದು. ಅದರಂತೆ ಕಳಪೆ ಬೀಜಗಳನ್ನು ಮಾರಾಟ ಮಾಡಿ ರೈತರನ್ನು ಕಷ್ಟಕ್ಕೆ ನೂಕಬಾರದು. ಒಂದು ವೇಳೆ ಹೀಗಾದರೆ ನಿಮ್ಮ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಅವರು ಮಾತನಾಡಿ ಇದುವರೆಗೂ ರೈತರ ಬೇಡಿಕೆ ಆಲಿಸಿದ್ದು, ಅವರಿಗೆ ನಾವು ಸ್ಪಂದಿಸುತ್ತೇವೆ ಎಂದರು.