
ಕೋಲಾರ,ಜೂ,೩೦– ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಇಲಾಖೆಯ ವಿವಿಧ ಅಧಿಕಾರಿಗಳು ನಡೆಸಿರುವ ಭ್ರಷ್ಟಾಚಾರ, ಸಂಬಂಧಿಕರು, ಆಪ್ತರ ಹೆಸರಿನಲ್ಲಿ ಮಾಡಿರುವ ಅಪಾರ ಆಸ್ತಿಯ ಕುರಿತು ಸಮಗ್ರ ತನಿಖೆ ನಡೆಸಬೇಕು. ಸಾರ್ವಜನಿಕರಿಗೆ ಅಗತ್ಯ ಗಿಡಗಳನ್ನು ಒದಗಿಸಬೇಕು, ಕೃಷಿ ಅರಣ್ಯ ಪ್ರೋತ್ಸಾಹಧನದ ಮೊತ್ತ ಹೆಚ್ಚಿಸ ಬೇಕು ಎಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಹುಜನ ಸಮೈಖ್ಯ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರು ಮಾತನಾಡಿ ಅರಣ್ಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಉತ್ತಮವಾದ ಎತ್ತರವಾದ ಹುಣಸೆ, ತೇಗ, ಸಿಲ್ವರ್ ಓಕ್, ಲಸು, ಜಂಬುನೇರಳೆ ಮತ್ತು ಶ್ರೀಗಂಧ,ರಕ್ತಚಂದನ ಮುಂತಾದ ಸಸಿಗಳನ್ನು ಒದಗಿಸಬೇಕು. ಮತ್ತು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಪ್ರಸ್ತುತ ನೀಡುತ್ತಿರುವ ಪ್ರೋತ್ಸಾಹ ಧನದ ಮೊತ್ತವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಇಲಾಖೆಯ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಾಣಿಕೆ ಮಾಡುವ ಸೌದೆ ಮತು ಇತರೆ ಅರಣ್ಯ ಉತ್ಪನ್ನಗಳನ್ನು ತಡೆಯಲು ಇಲಾಖೆಯವರು ಕ್ರಮ ವಹಿಸಬೇಕು.೧೯೮೦ ರ ಪೂರ್ವದಲ್ಲಿ ರೈತರಿಗೆ ಕಂದಾಯ ಇಲಾಖೆಯಿಂದ ಮಂಜೂರಾದ ರೈತರಿಗೆ ಸದರಿ ಜಮೀನುಗಳನ್ನು ನಿಯಮಾನುಸಾರ ಬಿಟ್ಟುಕೊಡಲು ಅರಣ್ಯ ಇಲಾಖೆ ತ್ವರಿತವಾಗಿ ಕ್ರಮವಹಿಸಬೇಕು ಎಂದು ಕೋರಿದರು.
ಅರಣ್ಯ ಭೂಮಿಗಳ ಕ್ರೋಢೀಕೃತ ದಾಖಲೆಯಂತೆ ಸರ್ಕಾರದ ಮಟ್ಟದಲ್ಲಿ ಈಗಾಗಲೆ ಎಸ್.ಐ.ಟಿ ಸಂಬಂಧ ಅರಣ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಆಗುವವರೆಗೆ ರೈತರನ್ನು ಒಕ್ಕಲೆಬ್ಬಿಸಬಾರದು, ರೈತರು ಅತಿ ಹೆಚ್ಚು ಶ್ರೀಗಂಧ ಮತ್ತು ರಕ್ತಚಂದನ ಸಸಿಗಳನ್ನು ಬೆಳೆಸಿಕೊಂಡಿದ್ದು ಕಳ್ಳಕಾಕರಿಂದ ನಿರಂತರವಾಗಿ ರೈತರು ತೊಂದರೆಗೆ ಒಳಗಾಗಿರುತ್ತಾರೆ.ಇದರ ಸಂಬಂಧ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು ರೈತರಿಗೆ ಸೂಕ್ತ ಬಂದೋಬಸ್ತು ಒದಗಿಸಲು ಮನವಿ ಮಾಡಿದರು.
ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ ಮಹೇಶ್ ಅವರು, ಹೊರಗುತ್ತಿಗೆಯಲ್ಲಿ ವಾಹನ ಚಾಲಕನಾಗಿ ನೇಮಕ ಮಾಡಿಕೊಂಡಿರುವ ಭರತ್ಕುಮಾರ್ ರೆಡ್ಡಿ ಇವರನ್ನು ಸ್ವಂತ ಕೆಲಸಗಳಿಗೆ ಬಳಸಿಕೊಂಡು ಸರ್ಕಾರಿ ವೇತನ ದುರುಪಯೋಗ ಪಡಿಸಿಕೊಂಡಿರುವುದರ ವಿರುದ್ದ ಸಮಗ್ರ ತನಿಖೆಯಾಗಬೇಕು ಹಾಗೂ ಸೇವೆಯಿಂದ ವಜಾ ಗೊಳಿಸ ಬೇಕೆಂದು ಆಗ್ರಹಿಸಿದರು.
ರಘುರಾಮರೆಡ್ಡಿ ಅರಣ್ಯಗುತ್ತಿಗೆದಾರ ಶ್ರೀನಿವಾಸಪುರ ಕೋಲಾರ ಮತ್ತು ಮಾಲೂರು ವಲಯಗಳಲ್ಲಿ ಅರಣ್ಯ ಒತ್ತುವರಿ ತೆರವು ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿಯಮಬಾಹಿರವಾಗಿ ಟೆಂಡರ್‌ಗಳಲ್ಲಿ ವಂಚನೆ ಮಾಡಿದ್ದರೂ, ಸುಮಾರು ೩೦ ರಿಂದ ೪೦ ಕೋಟಿ ರೂಗಳ ಹಣ ದುರುಪಯೋಗ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಕೋರಿದರು.
ಉಪ ಅರಣ್ಯ ಸಂರಕ್ಷಣಾಧಿಖಾರಿ ಸರೀನಾ ಸಿಕ್ಕಲಿಗಾರ್ ಅವರು, ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿಯಲ್ಲಿ ಅರಣ್ಯದ ಅಂಚಿನಲ್ಲಿರುವ ಗ್ರಾಮಗಳ ಫಲಾನುಭವಿಗಳ ಕುಟುಂಬಗಳಿಗೆ ಸಂದಾಯವಾಗ ಬೇಕಾದ ಹಣವನ್ನು ಗ್ಯಾಸ್ ಏಜನ್ಸಿಗಳ ಮೂಲಕ ಸರ್ಕಾರಕ್ಕೆ ವಂಚಿಸಿ ಹಣ ದುರುಪಯೋಗ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಸರೀನಾ ಸಿಕ್ಕಲಿಗಾರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಅವರು ಸರ್ಕಾರದ ಯೋಜನೆ ಕಾಮಗಾರಿಗಳು ಹಾಗೂ ಕೇಂದ್ರ ಸರ್ಕಾರದ ಮಾನದಂಡಗಳನ್ನು ಅಂದರೆ ನಗರ ವ್ಯಾಪ್ತಿಯಲ್ಲಿಯೇ ದುರುಪಯೋಗ ಪಡಿಸಿಕೊಂಡಿರುತ್ತಾರೆ ಎಂದು ಆರೋಪಿಸಿದರು.
ಉದಾಹರಣೆಗೆ ನಗರ ವ್ಯಾಪ್ತಿಯಲ್ಲಿ ಮಾಡಬೇಕಾದ ಕಾಮಗಾರಿಯನ್ನು ನಗರ ಹೊರ ವಲಯದ ಮಡೇರಹಳ್ಳಿ ಸಸ್ಯಕ್ಷೇತ್ರದಲ್ಲಿ ನಿಯಮ ಮತ್ತು ಮಾನದಂಡಗಳನ್ನು ಉಲ್ಲಂಘಿಸಿ ,ಕಾಮಗಾರಿಗಳನ್ನು ಅಪೂರ್ಣವಾಗಿ ನಿರ್ಮಾಣ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದಲ್ಲದೆ,ಸರ್ಕಾರದ ಅನುದಾನವನ್ನು ಲಪಟಾಯಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಬಗ್ಗೆ ಕೇಂದ್ರ ಸರ್ಕಾರದ ಸಿ.ಇ.ಸಿ ವತಿಯಿಂದ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವವನ್ನು ಬಹುಜನ ಸಮೈಖ್ಯ ಸಮಿತಿ ರಾಜ್ಯಾಧ್ಯಕ್ಷ ಸಂಗೊಂಡಹಳ್ಳಿ ಪಿಳ್ಳಪ್ಪ, ಹರಟಿ ಸಂಪತ್, ಹರಟಿ ಪ್ರಕಾಶ್, ರಾಜ್ಯ ಕಾರ್ಯದರ್ಶಿ ಬೈರಂಡಹಳ್ಳಿ ನಾಗೇಶ್, ಜಿಲ್ಲಾಧ್ಯಕ್ಷ ಆವಣಿ ಮಂಜುನಾಥ್, ಮಹಿಳಾ ಮುಖಂಡರಾದ ಶಾಲಿನಿ ಮತ್ತಿತರರು ವಹಿಸಿದ್ದು, ಜಿಲ್ಲಾಧಿಕಾರಿಗಳ ಪರವಾಗಿ ತಹಸೀಲ್ದಾರ್ ಹರಿಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
































