ಶಿವಸೃಷ್ಟಿಗೆ 700 ಕೋಟಿ ಅನುದಾನಕ್ಕೆ ಬೇಡಿಕೆ

ಬಸವಕಲ್ಯಾಣ: ಅ.12:ಇಲ್ಲಿ ನಿರ್ಮಿಸುತ್ತಿರುವ ಶಿವಸೃಷ್ಟಿಗೆ 700 ಕೋಟಿ ಅನುದಾನ ಒದಗಿಸಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತೇನೆ ಎಂದು ಶಾಸಕ ಶರಣು ಸಲಗರ ಭರವಸೆ ನೀಡಿದ್ದಾರೆ.

ಇಲ್ಲಿನ ಬಸವೇಶ್ವರ ಚೌಕ್ ನಲ್ಲಿನ ಬಿಕೆಡಿಬಿ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಮರಾಠಾ ನೌಕರರ ಸಂಘದಿಂದ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ `ರಾಜಮಾತಾ ಜೀಜಾವು ಪ್ರತಿಭಾ ಪುರಸ್ಕಾರ’ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಲ್ಲಿನ ಶಿವಸೃಷ್ಟಿ ರಾಜ್ಯ ಹಾಗೂ ತೆಲಂಗಾಣಾ, ಆಂಧ್ರ, ಮಹಾರಾಷ್ಟ್ರದ ಜನರ ಶ್ರದ್ಧೆ ಮತ್ತು ಉತ್ತಮ ಪ್ರವಾಸಿ ತಾಣವಾಗಿ ರೂಪುಗೊಳ್ಳಬೇಕು ಎಂಬುದು ತಮ್ಮ ಪ್ರಯತ್ನವಾಗಿದೆ. ಆದ್ದರಿಂದ ನಾಳೆ ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇನೆ. ಯಾವುದೇ ಕನಸು ನನಸಾಗಲು ನಿರಂತರ ಪ್ರಯತ್ನ ಅತ್ಯವಶ್ಯಕ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ ಮಾತನಾಡಿ, ನಾನು ಸಹ ಹಲವಾರು ವರ್ಷಗಳಿಂದ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸುವ ಈ ಕಾರ್ಯಕ್ರಮದಿಂದ ಸಂತಸವಾಗಿದೆ. ವಿಧಾನ ಪರಿಷತ್ ಸದಸ್ಯನಾಗಿ ಸಮಾಜದ ಹಿತಕ್ಕಾಗಿ ದುಡಿಯುತ್ತೇನೆ. ಮರಾಠಾ ಸಮಾಜದ ಅಭಿವೃದ್ಧಿಗಾಗಿ ವಿವಿಧ ಉತ್ತಮ ಕಾರ್ಯಗಳು ನಡೆಯುವುದು ಅಗತ್ಯವಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ಮಕ್ಕಳ ಅಭಿವೃದ್ಧಿಯಲ್ಲಿ ಪಾಲಕರ ಪಾತ್ರ ಹೆಚ್ಚಿದೆ. ಸತತವಾಗಿ ಪರಿಶ್ರಮಪಟ್ಟರೆ ಮಾತ್ರ ಯಾವುದೇ ಕಾರ್ಯದಲ್ಲಿ ಯಶಸ್ಸು ಪಡೆಯಬಹುದು ಎಂದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, ಹೆಸರಿಗೆ ಸಂಘಟನೆ ಮಾಡದೆ ಉತ್ತಮ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳಬೇಕು. ಸಮಾಜ ಮುಂದುವರೆಯಲು ಎಲ್ಲರ ಸಹಕಾರ ಅಗತ್ಯವಾಗಿದೆ. ಇಲ್ಲಿ ನಿರ್ಮಿಸುತ್ತಿರುವ ಶಿವಸೃಷ್ಟಿಯ ಕೆಲಸ ಉತ್ತಮ ರೀತಿಯಲ್ಲಿ ಎಲ್ಲರ ಗಮನ ಸೆಳೆಯುವಂತೆ ಆಗಬೇಕು ಎಂದರು.

ಸಿಪಿಐ ಅಲಿಸಾಬ್, ಸಂಘದ ಅಧ್ಯಕ್ಷ ಮಹೇಶ ಮುಳೆ ಮಾತನಾಡಿದರು. ನಗರಸಭೆ ಅಧ್ಯಕ್ಷ ಸಗೀರುದ್ದೀನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಮುಖಂಡರಾದ ಅಂಗದರಾವ ಜಗತಾಪ, ಅರ್ಜುನ ಕನಕ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರು, ಸಿಪಿಐ ಕೃಷ್ಣಕುಮಾರ ಪಾಟೀಲ, ಎಇಇ ರಮೇಶ ಪಾಟೀಲ ಪಶು ವೈದ್ಯಾಧಿಕಾರಿ ಡಾ.ರಾಜಕುಮಾರ ಬಿರಾದಾರ, ಸಮನ್ವಯಾಧಿಕಾರಿ ಪ್ರಭಾಕರ ಕಳಮಾಸೆ, ಬಿಸಿಯೂಟ ಅಧಿಕಾರಿ ಸಂಜೀವಕುಮಾರ ಕಾಂಗೆ ಉಪಸ್ಥಿತರಿದ್ದರು.

ಬಾಲಕೃಷ್ಣ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಮದನ ಪಾಟೀಲ ಸ್ವಾಗತಿಸಿದರು. ಶ್ರೀಕಾಂತ ಚವ್ಹಾಣ, ದತ್ತಾತ್ರಿ ಪವಾರ ನಿರೂಪಿಸಿದರು.