
ಸಂಜೆ ವಾಣಿ ವಾರ್ತೆ
ಯಾದಗಿರಿ: ರೈತರ ಬೆಳೆಗಳ ರಕ್ಷಣೆಗೆ ಪ್ರತಿದಿನ ನಿರಂತರ ೭ ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಪೂರೈಸಬೇಕು. ನಾಲ್ಕು ದಿನಗಳೊಳಗೆ ಬೇಡಿಕೆ ಈಡೇರಿಸದಿದ್ದರೆ ಐದನೇ ದಿನದಿಂದ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಶೋಷಿತರ ಸೇವಾ ಸಮಿತಿಯ ಯಾದಗಿರಿ ಘಟಕದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಹಿಂದ ನಾಯಕ ಮೌಲಾಲಿ ಅನಪೂರ ಅವರು, ಯಾದಗಿರಿ ತಾಲೂಕಿನಲ್ಲಿ ಮಳೆಯ ಅಭಾವದಿಂದ ಬೆಳೆಗಳು ಒಣಗುತ್ತಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೊಳವೆಬಾವಿಗಳ ಮೂಲಕ ಬೆಳೆಗಳಿಗೆ ನೀರುಣಿಸಲು ವಿದ್ಯುತ್ ಅತ್ಯಗತ್ಯವಾಗಿದ್ದು, ಸಮರ್ಪಕ ವಿದ್ಯುತ್ ಪೂರೈಕೆಯಾಗದಿದ್ದರೆ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿಂದೆ ರೈತರಿಗೆ ಪ್ರತಿದಿನ ೭ ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುತ್ತಿತ್ತು. ಆದರೆ, ಇದೀಗ ೬ ಗಂಟೆಗಳಿಗೆ ಸೀಮಿತಗೊಳಿಸಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಅಲ್ಲದೆ, ನಿಗದಿತ ಸಮಯಕ್ಕೆ ವಿದ್ಯುತ್ ಪೂರೈಕೆಯಾಗದಿರುವುದು ಹಾಗೂ ಕಡಿಮೆ ವೋಲ್ಟೇಜ್ ಸಮಸ್ಯೆಯಿಂದ ಪಂಪ್ಸೆಟ್ಗಳು ಮತ್ತು ಮೋಟಾರ್ಗಳಿಗೆ ಹಾನಿಯಾಗುವ ಆತಂಕ ಎದುರಾಗಿದೆ ಎಂದು ಹೇಳಿದರು.
ಭತ್ತ, ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಬೆಳೆಗಳಿಗೆ ಸಮರ್ಪಕವಾಗಿ ನೀರುಣಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಜೆಸ್ಕಾಂ ಅಧಿಕಾರಿಗಳು ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಪ್ರಮುಖ ಬೇಡಿಕೆಗಳು
- ರೈತರಿಗೆ ಪ್ರಸ್ತುತ ೬ ಗಂಟೆಗಳ ಬದಲಾಗಿ ಪ್ರತಿದಿನ ನಿರಂತರ ೭ ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು.
- ಹಳೆಯದಾಗಿರುವ ವಿದ್ಯುತ್ ತಂತಿಗಳನ್ನು ತಕ್ಷಣ ಬದಲಾಯಿಸಬೇಕು.
- ವಿದ್ಯುತ್ ಪೂರೈಕೆಗೆ ಗುಣಮಟ್ಟದ ತಂತಿಗಳನ್ನು ಅಳವಡಿಸಬೇಕು.
- ಕಡಿಮೆ ವೋಲ್ಟೇಜ್ ಸಮಸ್ಯೆಯನ್ನು ನಿವಾರಿಸಿ, ಪಂಪ್ಸೆಟ್ಗಳು ಮತ್ತು ಮೋಟಾರ್ಗಳಿಗೆ ಹಾನಿಯಾಗದಂತೆ ಸಮರ್ಪಕ ವೋಲ್ಟೇಜ್ನಲ್ಲಿ ವಿದ್ಯುತ್ ಪೂರೈಸಬೇಕು.
ಈ ಬೇಡಿಕೆಗಳನ್ನು ನಾಲ್ಕು ದಿನಗಳೊಳಗೆ ಈಡೇರಿಸದಿದ್ದರೆ ಐದನೇ ದಿನದಿಂದ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ರೈತರ ಹೋರಾಟದಿಂದ ಉಂಟಾಗುವ ಪರಿಸ್ಥಿತಿಗೆ ಸಂಬAಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ ಎಂದು ಸಮಿತಿ ಎಚ್ಚರಿಕೆ ನೀಡಿದೆ.ಈ ಸಂಬAಧ ಕರ್ನಾಟಕ ರಾಜ್ಯ ಶೋಷಿತರ ಸೇವಾ ಸಮಿತಿಯ ಯಾದಗಿರಿ ಘಟಕದ ವತಿಯಿಂದ ರಾಜ್ಯದ ಮುಖ್ಯಮಂತ್ರಿ, ಇಂಧನ ಸಚಿವರು ಹಾಗೂ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಮರೆಯಪ್ಪ ಗೋಸಿ, ಅಶೋಕ ವಾಲ್ಕರ್, ಆಂಜನೇಯ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.





















