Home ಜಿಲ್ಲೆ ಹಿಂದಿ ಮಾತನಾಡುವಂತೆ ಒತ್ತಾಯಿಸಿ ಯಾದಗಿರಿ ಮೂಲದ ಡೆಲಿವರಿ ಯುವಕನಿಗೆ ಹಲ್ಲೆ ...

ಹಿಂದಿ ಮಾತನಾಡುವಂತೆ ಒತ್ತಾಯಿಸಿ ಯಾದಗಿರಿ ಮೂಲದ ಡೆಲಿವರಿ ಯುವಕನಿಗೆ ಹಲ್ಲೆ ಕಠಿಣ ಕ್ರಮಕ್ಕೆ ಜಯ ಕರ್ನಾಟಕ ಸಂಘಟನೆ ಆಗ್ರಹ

ಯಾದಗಿರಿ: ಕನ್ನಡ ಮಾತನಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹಿಂದಿಯಲ್ಲಿ ಮಾತನಾಡುವಂತೆ ಒತ್ತಾಯಿಸಿ ಯಾದಗಿರಿ ಮೂಲದ ಡೆಲಿವರಿ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕೂಡಲೇ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ವಿಶ್ವನಾಥ ನಾಯಕ ಆಗ್ರಹಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ಮೂಲದ ಬಸವರಾಜ್ ಹಲ್ಲೆಗೊಳಗಾದ ಯುವಕ. ಬೆಂಗಳೂರಿನಲ್ಲಿ ಕಳೆದ ಕೆಲ ವರ್ಷಗಳಿಂದ ನೆಲೆಸಿರುವ ಅವರು ಬಿ.ಇಡಿ ಪದವಿ ಪಡೆದಿದ್ದು, ಪಾರ್ಟ್‍ಟೈಂ ಆಗಿ ಜೆಪೆÇ್ಪೀ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದಾರೆ.

ಆ.8ರಂದು ಮುಂಜಾನೆ 4ರ ಸುಮಾರಿಗೆ ಅಟ್ಟೂರು ಸಮೀಪದ ಸಂತೋಷ್ ನಗರದಲ್ಲಿ ಡೆಲಿವರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಕೆಲವರು ಬಸವರಾಜ್ ಅವರನ್ನು ತಡೆದು ಹಿಂದಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ತಮಗೆ ಹಿಂದಿ ಬರುವುದಿಲ್ಲ, ಕನ್ನಡದಲ್ಲಿ ಮಾತನಾಡುವುದಾಗಿ ಹೇಳಿದ್ದಕ್ಕೆ ಆರೋಪಿಗಳು ಅಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಲ್ಲೆಗೊಳಗಾದ ಬಸವರಾಜ್ ಕೂಡಲೇ ತಮ್ಮ ಸ್ನೇಹಿತ ಅಶೋಕ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅಶೋಕ್ ಅವರ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ. ರಸ್ತೆಯಲ್ಲಿ ಬಿದ್ದಿದ್ದ ಕೋಲಿನಿಂದ ಏಕಾಏಕಿ ಹಲ್ಲೆ ನಡೆಸಿ, ಇಬ್ಬರೂ ಕೆಳಗೆ ಬಿದ್ದ ಬಳಿಕ ಕೆಲ ಯುವತಿಯರೂ ಸೇರಿದಂತೆ ಹಲವರು ಕಾಲಿನಿಂದ ಒದ್ದು ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಕುರಿತು ನೀಡಿದ ದೂರಿನ ಆಧಾರದ ಮೇಲೆ ಪೆÇಲೀಸರು ಬಿಹಾರ ಮೂಲದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣವನ್ನು ಸರ್ಕಾರ ಹಾಗೂ ಪೆÇಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಭಾಷೆಯ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಸಂಘಟನೆಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವಿಶ್ವನಾಥ ನಾಯಕ ಎಚ್ಚರಿಕೆ ನೀಡಿದ್ದಾರೆ.