ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ ಡೆಲಿವರಿ ಮ್ಯಾನೇಜರ್ ಸೆರೆ

ಬೆಂಗಳೂರು, ನ.೪-ಕಿರುತೆರೆಗೆ ಗುಪ್ತಾಂಗದ ಪೋಟೋ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ ಕಾಮುಕ ಖಾಸಗಿ ಕಂಪನಿಯ ಡೆಲವರಿ ಮ್ಯಾನೇಜರ್ ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ವೈಟ್ ಫೀಲ್ಡ್ ನ ಖಾಸಗಿ ಕಂಪನಿಯ ಡೆಲವರಿ ಮ್ಯಾನೇಜರ್ ನವೀನ್ ಕೆ ಮಾನ್ ಬಂಧಿತ ಆರೋಪಿಯಾಗಿದ್ದಾನೆ. ಆತನನ್ನು ತೀವ್ರ ವಿಚಾರಣೆ ನಡೆಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.


ಫೇಸ್‌ಬುಕ್‌ನಲ್ಲಿ ಗುಪ್ತಾಂಗದ ವಿಡಿಯೋ ಕಳಿಸಿ ನಟಿಗೆ ಆರೋಪಿಯು ಕಿರುಕುಳ ನೀಡಿದ್ದಾನೆ. ತೆಲುಗು ಹಾಗೂ ಕನ್ನಡ ಧಾರವಾಹಿಗಳಲ್ಲಿ ಸಂತ್ರಸ್ತೆ ನಟಿಸಿದ್ದು, ಆರೋಪಿ ಕಳೆದ ೩ ತಿಂಗಳಿನಿಂದ ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ.


ಫೇಸ್‌ಬುಕ್‌ನಲ್ಲಿ ರಿಕ್ವೆಸ್ಟ್:
ಆರೋಪಿ ಮೊದಲು ಫೇಸ್‌ಬುಕ್‌ನಲ್ಲಿ ಓಂಗಿಇಇಓZ ಎಂಬ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾನೆ. ನಟಿ ರಿಕ್ವೆಸ್ಟ್ ಸ್ವೀಕರಿಸದ ಹಿನ್ನೆಲೆ ಮೆಸೆಂಜರ್‌ನಲ್ಲಿ ಮೆಸೇಜ್ ಮಾಡಿದ್ದಾನೆ. ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.


ನಟಿ ಮೆಸೇಜ್ ಮಾಡದಂತೆ ಆರೋಪಿಗೆ ಎಚ್ಚರಿಕೆ ನೀಡಿದ್ದರು. ಆದ್ರೂ ಕಿರುಕುಳ ಹೆಚ್ಚಾಗ್ತಿದ್ದ ಹಿನ್ನೆಲೆ ಆತನ ಅಕೌಂಟ್ ಬ್ಲಾಕ್ ಮಾಡಿದ್ದರು ನಟಿ. ಬಳಿಕ ಬೇರೆ ಐಡಿಯಿಂದ ಅಶ್ಲೀಲ ಮೆಸೇಜ್ ಕಳಿಸಿದ್ದ, ಗುಪ್ತಾಂಗದ ವಿಡಿಯೋ ಕಳಿಸಿ ವಿಕೃತಿ ಮೆರೆಯುತ್ತಿದ್ದ. ಆದ್ರೂ ತಾಳ್ಮೆ ಕಳೆದುಕೊಳ್ಳದ ನಟಿ ಇದೇ ನವೆಂಬರ್ ೧ರಂದು ನಾಗರಭಾವಿಯ ನಂದನ್ ಪ್ಯಾಲೆಸ್ ಬಳಿ ಆರೋಪಿಯನ್ನ ಭೇಟಿ ಮಾಡಿ ಬುದ್ಧಿ ಮಾತು ಹೇಳಿದ್ದರು.


ಬುದ್ಧಿ ಕೇಳದ ಕಾಮುಕ:
ಈ ರೀತಿ ಮೆಸೇಜ್ ಮಾಡಬಾರದು ಅಂತ ಕಿವಿಮಾತು ಹೇಳಿದರೂ ಬುದ್ಧಿ ಕೇಳದ ಆರೋಪಿ ಮತ್ತೆ ಅಶ್ಲೀಲ ಮೆಸೇಜ್ ಮಾಡುವುದನ್ನು ಮುಂದುವರೆಸಿದ್ದು, ಇದರಿಂದ ನೊಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ನಟಿ ದೂರು ನೀಡಿದ್ದರು.


ನಟಿಯ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.