Home ಜಿಲ್ಲೆ ಹಗಲಿರುಳು ದುಡಿದ ಕೈಗಳಿಗೆ ನ್ಯಾಯ ಕೊಡಿ: ನಿವೃತ್ತ ಸಾರಿಗೆ ನೌಕರರ ಆಕ್ರೋಶಇಪಿಎಸ್-೯೫ ಪಿಂಚಣಿ ಹೆಚ್ಚಳ, ಉಚಿತ...

ಹಗಲಿರುಳು ದುಡಿದ ಕೈಗಳಿಗೆ ನ್ಯಾಯ ಕೊಡಿ: ನಿವೃತ್ತ ಸಾರಿಗೆ ನೌಕರರ ಆಕ್ರೋಶಇಪಿಎಸ್-೯೫ ಪಿಂಚಣಿ ಹೆಚ್ಚಳ, ಉಚಿತ ವೈದ್ಯಕೀಯ ಸೌಲಭ್ಯಕ್ಕೆ ಆಗ್ರಹ

ಯಾದಗಿರಿ: “ನಾವು ಬದುಕಿದ್ದೇವೆ ಎಂಬುದನ್ನು ಸರ್ಕಾರ ಮರೆತಿದೆಯೇ?” ಎಂದು ಮೂರು ದಶಕಗಳ ಕಾಲ ಬಿಸಿಲು, ಮಳೆ, ಚಳಿ ಎನ್ನದೆ ಸಾರಿಗೆ ಸೇವೆಯಲ್ಲಿ ದುಡಿದ ನಿವೃತ್ತ ನೌಕರರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಸ್ವಾಮಿ ವಿವೇಕಾನಂದ ನಗರದ ಆಂಜನೇಯ-ತಾಯಮ್ಮ ದೇವಸ್ಥಾನದ ಆವರಣದಲ್ಲಿ ಭಾನುವಾರ ರಾಷ್ಟ್ರೀಯ ಸಂಘರ್ಷ ಸಮಿತಿ (ಓಂಅ) ಯಾದಗಿರಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಜಿಲ್ಲೆಯ ನೂರಾರು ನಿವೃತ್ತ ಸಾರಿಗೆ ನೌಕರರು ಭಾಗವಹಿಸಿ, ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಇಪಿಎಸ್-೯೫ ಯೋಜನೆಯಡಿ ನಿವೃತ್ತರಾದವರಿಗೆ ಪ್ರಸ್ತುತ ದೊರೆಯುತ್ತಿರುವ ಪಿಂಚಣಿ ಮೊತ್ತ ಜೀವನ ನಿರ್ವಹಣೆಗೆ ಸಾಲುತ್ತಿಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದರು. ಹಲವು ವರ್ಷಗಳ ಕಾಲ ಸಾರಿಗೆ ಸೇವೆ ಸಲ್ಲಿಸಿದವರಿಗೆ ಕನಿಷ್ಠ ಪಿಂಚಣಿ ಹೆಚ್ಚಳ ಮಾಡಬೇಕು. ವಯೋವೃದ್ಧರಾಗಿರುವ ಸಂದರ್ಭದಲ್ಲಿ ಔಷಧಿ ಹಾಗೂ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟವಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಸಮಾವೇಶದ ಮುಖ್ಯ ಅತಿಥಿ ಹಾಗೂ ರಾಷ್ಟ್ರೀಯ ಸಂಯೋಜಕ ರಮಾಕಾಂತ ನರಗುಂದ ಮಾತನಾಡಿ, “ಇದು ಭಿಕ್ಷೆಯಲ್ಲ, ನಾವು ದುಡಿದ ಹಕ್ಕು. ನಿವೃತ್ತ ನೌಕರರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು. ನಮಗೆ ಅನುಕಂಪವಲ್ಲ, ನ್ಯಾಯ ಬೇಕು” ಎಂದು ಆಗ್ರಹಿಸಿದರು.

ಪ್ರಮುಖ ಬೇಡಿಕೆಗಳು

  • ಇಪಿಎಸ್-೯೫ ಯೋಜನೆಯಡಿ ಕನಿಷ್ಠ ಪಿಂಚಣಿಯನ್ನು ತಿಂಗಳಿಗೆ ?೭,೫೦೦ಕ್ಕೆ ಹೆಚ್ಚಿಸಬೇಕು.
  • ಪಿಂಚಣಿದಾರರಿಗೆ ತುಟ್ಟಿಭತ್ಯೆ (ಆಂ) ನೀಡಬೇಕು.
  • ನಿವೃತ್ತರು ಹಾಗೂ ಅವರ ಕುಟುಂಬದವರಿಗೆ ಶೇ.೧೦೦ರಷ್ಟು ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು.
  • ವಿಧವಾ ಪತ್ನಿಯರಿಗೆ ಪೂರ್ಣ ಪಿಂಚಣಿ ಸೌಲಭ್ಯ ಮುಂದುವರಿಸಬೇಕು.
  • ಹೆಚ್ಚಿನ ಪಿಂಚಣಿ ಕುರಿತ ನ್ಯಾಯಾಲಯದ ಆದೇಶಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು.

ರಾಜ್ಯ ಖಜಾಂಚಿ ಶಂಕರ್ ಕುಲಕರ್ಣಿ ಮಾತನಾಡಿ, “ನಾವು ಒಗ್ಗಟ್ಟಾಗಿ ಹೋರಾಟ ನಡೆಸಿದಾಗ ಮಾತ್ರ ಸರ್ಕಾರ ನಮ್ಮ ಬೇಡಿಕೆಗಳತ್ತ ಗಮನ ಹರಿಸಲಿದೆ. ಇದು ಯಾದಗಿರಿಯ ನಿವೃತ್ತ ನೌಕರರ ಹೋರಾಟ ಮಾತ್ರವಲ್ಲ, ದೇಶದಾದ್ಯಂತ ಇರುವ ನಿವೃತ್ತರ ಹಕ್ಕುಗಳ ಹೋರಾಟವಾಗಿದೆ” ಎಂದರು.

ಜಿಲ್ಲಾಧ್ಯಕ್ಷ ಸಿದ್ದಣ್ಣಗೌಡ ಚನ್ನೂರು ಮಾತನಾಡಿ, “ಸರ್ಕಾರ ನಮ್ಮ ಮನವಿಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ವಿಧಾನಸೌಧದ ಎದುರು ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದು ಅನಿವಾರ್ಯವಾಗಲಿದೆ” ಎಂದು ಎಚ್ಚರಿಸಿದರು.

ಜಿಲ್ಲಾ ಉಪಾಧ್ಯಕ್ಷ ಕೆ.ಟಿ. ಜಾಧವ್ ಅವರು ನಿವೃತ್ತ ನೌಕರರು ಮುಂದಿನ ಹೋರಾಟಕ್ಕೆ ಸಜ್ಜಾಗುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ಹೊನ್ನಪ್ಪ ವಡಿಗೇರಾ, ಭೀಮಸೇನರಾವ್ ರಾಯಚೂರು, ಪ್ರಧಾನ ಕಾರ್ಯದರ್ಶಿ ಪರಶುರಾಮ್, ಸಂಗನಗೌಡ ಬಾಗೇವಾಡಿ, ಬಸವರಾಜಪ್ಪ ತಡಿಬಿಡಿ, ರವಿಗೌಡ ಪಾಟೀಲ್, ಬಸವರಾಜ ದೇಸಾಯಿ, ವೆಂಕೋಬ ಭಂಡಾರಿ, ಬಸವರಾಜ ಮಂಗ್ಯಾಳ, ಗಂಗಯ್ಯ ಸ್ವಾಮಿ, ರಾಮ್‌ರಾವ್ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ದೇವೀಂದ್ರಪ್ಪ ಮ್ಯಾಗೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.