
ನವದೆಹಲಿ, ಡಿ.೪- ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಇಂದು ಭಾರತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ನೀಡಲಿದ್ದು ಅವರನ್ನು ಸ್ವಾಗತಿಸಲು ಭಾರತ ಸಜ್ಜಾಗಿದೆ.
ಸಂಜೆ ೨೩ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಉನ್ನತ ಮಟ್ಟದ ನಿಯೋಗದ ಜೊತೆ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ವ್ಲಾಡಿಮಿರ್ ಪುಟಿನ್ ಅವರ ಎರಡು ದಿನಗಳ ಭೇಟಿಯ ಸಮಯದಲ್ಲಿ ನಡೆಯುವ ಮಾತುಕತೆಗಳು ರಕ್ಷಣಾ ಸಂಬಂಧಗಳನ್ನು ಗಟ್ಟಿಗೊಳಿಸುವುದರ ಜೊತೆಗೆ ವ್ಯಾಪಾರ ಮತ್ತು ಇಂಧನ ಸಹಕಾರದ ಬಗ್ಗೆ ಗಮನಹರಿಸಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಸಭೆ ನಡೆಸಲಿ ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿರುವ ಖಾಸಗಿ ಭೋಜನಕೂಟದಲ್ಲಿ ಭಾಗಿಯಾಗಲಿದ್ದಾರೆ,
ಇದೇ ವೇಳೆ ವ್ಯಾಪಾರ ಮತ್ತು ಆರ್ಥಿಕ ಸಹಕಾರ ಮತ್ತು ಕೈಗಾರಿಕಾ ಸಹಕಾರ, ನವೀನ ತಂತ್ರಜ್ಞಾನಗಳು, ಸಾರಿಗೆ, ಶಾಂತಿಯುತ ಬಾಹ್ಯಾಕಾಶ ಪರಿಶೋಧನೆ, ಗಣಿಗಾರಿಕೆ, ಆರೋಗ್ಯ ಮತ್ತು ಕಾರ್ಮಿಕ ವಲಸೆ ಕಾರ್ಯಕ್ರಮಗಳಲ್ಲಿ ಇತರ “ಭರವಸೆಯ ಯೋಜನೆಗಳು” ಕುರಿತು ಚರ್ಚೆ ನಡೆಯುವ ಸಾಧ್ಯತೆಗಳಿವೆ.
ರಷ್ಯಾದ ಸಚಿವ ಯೂರಿ ಉಷಾಕೋವ್ ಪ್ರತಿಕ್ರಿಯಿಸಿ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ರಾಜಕೀಯ ಸಂವಾದ ಉಭಯ ದೇಶಗಳ ನಡುವಿನ ಬಾಂಧವ್ಯ ಬಲವರ್ಧನಗೆ ಸಾಕ್ಷಿಯಾಗಲಿದೆ ಎಂದಿದ್ದಾರೆ.
ರಷ್ಯಾದಿಂದ ತೈಲ ಖರೀದಿ ಮಾಡಲಾಗುತ್ತಿದೆ ಎನ್ನುವ ಕಾರಣದಿಂದ ಭಾರತದ ಆಮದುಗಳ ಮೇಲೆ ಶೇಕಡಾ ೫೦ ರಷ್ಟು ಸುಂಕ ವಿಧಿಸುವ ಮೂಲಕ ಭಾರತದ ಮೇಲೆ ಸುಂಕಾಸ್ತ್ರ ಪ್ರಯೋಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ದ ಸೆಡ್ಡು ಹೊಡೆಯುವ ಪ್ರಯತ್ನ ಇದಾಗಿದೆ ಎಂದು ಹೇಳಲಾಗಿದೆ.
ರಷ್ಯಾ ಅಧ್ಯಕ್ಷರ ಭೇಟಿ ವೇಳೆ ರಷ್ಯಾ ಭಾರತಕ್ಕೆ ಎಸ್-೫೭ ಫೈಟರ್ ಜೆಟ್‌ಗಳನ್ನು ಪೂರೈಸುವ ಸಾಧ್ಯತೆಯ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಭಾರತ ಐದನೇ ತಲೆಮಾರಿನ ಫೈಟರ್ ಜೆಟ್‌ಗಳ ಬ್ಯಾಚ್ ಅನ್ನು ಖರೀದಿಸುವ ಪ್ರಕ್ರಿಯೆಯಲ್ಲಿದ್ದು ಈ ಸಂಬಂಧ ಚರ್ಚೆ ಆಗುವ ನಿರೀಕ್ಷೆ ಇದೆ ಎಂದಿದ್ದಾರೆ.
ಬಿಗಿ ಭದ್ರತೆ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೆಹಲಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. ಕಟ್ಟುನಿಟ್ಟಿನ ಕಣ್ಗಾವಲಿಗೆ ೫ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪುಟಿನ್ ಅವರು ವಾಸ್ತವ್ಯ ಹೂಡುವ ಸ್ಥಳವನ್ನು ಗೌಪ್ಯವಾಗಿ ಇಡಲಾಗಿದೆ. ಪುಟಿನ್ ಆಗಮನದಿಂದ ಅವರು ವಾಪಸ್ ತೆರಳುವ ತನಕ ಪ್ರತಿ ಚಲನವಲನಗಳನ್ನು ಜಂಟಿ ಕಾರ್ಯಾಚರಣೆ ಬಹುಭದ್ರತಾ ಘಟಕಗಳಿಂದ ಟ್ರಾಕ್ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಡ್ರೋನ್ ನಿಷೇಧ
ವಿವಿ ಐಪಿಗಳ ಸಂಚಾರಕ್ಕಾಗಿ ನಿಗಧಿಪಡಿಸಿರುವ ಎಲ್ಲಾ ಮಾರ್ಗಗಳು ಮುಂಚಿತವಾಗಿಯೇ ಸುರಕ್ಷಿತಗೊಳಿಸಲಾಗಿದೆ. ಪ್ರಯಾಣಿಕರಿಗೆ ಅನಾನುಕೂಲ ತಪ್ಪಿಸಲು ಸಂಚಾರ ಸಲಹೆಗಳನ್ನು ನೀಡಲಾಗಿದೆ. ಈ ವೇಳೆ ಡ್ರೋನ್ ಹಾರಾಟವನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪುಟಿನ್‌ಗೆ ವಿಶೇಷ ಔತಣಕೂಟ
ಭಾರತ, ರಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನವದೆಹಲಿ ಭೇಟಿ ಕೈಗೊಂಡಿರುವ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಔತಣಕೂಟವನ್ನು ಆಯೋಜಿಸಿದ್ದಾರೆ. ಪುಟಿನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲು ಮೋದಿ ಸಜ್ಜಾಗಿದ್ದಾರೆ. ಬಳಿಕ ಅವರ ಜೊತೆ ಖಾಸಗಿ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.


























