
ನಾಲ್ವರ ವಿರುದ್ಧ ಪ್ರಕರಣ
ನವದೆಹಲಿ, ಸೆ.೧೮: ದೆಹಲಿಯಲ್ಲಿ ೧೬ ವರ್ಷದ ಬಾಲಕಿಯ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ ಆಕೆಯನ್ನು ಇರಿದು ಹತ್ಯೆ ಮಾಡಿದ್ದಾರೆ. ಬಳಿಕ ಶವವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಿರುವ ಆರೋಪ ಕೇಳಿಬಂದಿದೆ.
ಸೆಪ್ಟೆಂಬರ್ ೧೩ರಂದು ಕೊಳೆತ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶವದ ಸ್ಥಿತಿ ತೀವ್ರವಾಗಿ ಕೊಳೆತು ಹೋಗಿದ್ದರಿಂದ ಆರಂಭದಲ್ಲಿ ಅದು ಮಹಿಳೆಯದ್ದೇ ಅಥವಾ ಪುರುಷನದ್ದೇ ಎಂಬುದನ್ನು ಕೂಡ ತಕ್ಷಣ ಗುರುತಿಸಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಹಾಗೂ ಆರೋಪಿಗಳು ಪರಸ್ಪರ ಪರಿಚಿತರಾಗಿದ್ದರು ಎನ್ನಲಾಗಿದ್ದು, ಘಟನೆ ನಡೆದ ವೇಳೆ ಆಕೆ ಆರೋಪಿಗಳೊಂದಿಗೆ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಟೆಂಪೋದಲ್ಲೇ ಆರೋಪಿಗಳು ಮದ್ಯ ಸೇವಿಸಿದ ಬಳಿಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆಕೆಯನ್ನು ಹತ್ಯೆ ಮಾಡಿ ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ ೧೩ರಂದು ವಾಯವ್ಯ ದೆಹಲಿಯ ಸ್ವರೂಪ್ ನಗರ ಪ್ರದೇಶದ ಕುಶಾಕ್ ರಸ್ತೆಯಲ್ಲಿರುವ ಜೈಪಾಲ್ ರಾಣಾ ಅವರ ಹೊಲದ ಸಮೀಪ ಬಾಲಕಿಯ ಕೊಳೆತ ಶವ ಪತ್ತೆಯಾಗಿತ್ತು. ಶವದ ಕೆಲವು ಭಾಗಗಳನ್ನು ಬೀದಿ ನಾಯಿಗಳು ತಿಂದುಹಾಕಿವೆ.
ಬಾಲಕಿ ಕಾಣೆಯಾಗಿರುವ ಬಗ್ಗೆ ಆಕೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿರಲಿಲ್ಲ. ಆಕೆ ಕೆಲವೊಮ್ಮೆ ಮನೆಯಿಂದ ಹೊರಗೆ ಹೋಗಿ ಕೆಲವು ದಿನಗಳ ಬಳಿಕ ವಾಪಸ್ ಬರುತ್ತಿದ್ದಳು ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಪೋಕ್ಸೋ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸೆಪ್ಟೆಂಬರ್ ೧೫ ಮತ್ತು ೧೬ರ ನಡುವಿನ ರಾತ್ರಿ ಪೊಲೀಸರು ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಿ, ಶಂಕಿತ ಟೆಂಪೋವನ್ನು ಪತ್ತೆಹಚ್ಚಿದ್ದಾರೆ. ಬಳಿಕ ಟೆಂಪೋ ಚಾಲಕನನ್ನು ಗುರುತಿಸಿ ವಿಚಾರಣೆ ನಡೆಸಲಾಯಿತು.
ತನಿಖೆ ಮುಂದುವರಿದಂತೆ, ಪ್ರಕರಣಕ್ಕೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ವಯಸ್ಕ ಆರೋಪಿಯನ್ನು ಖಡ್ಡಾ ಕಾಲೋನಿ ನಿವಾಸಿ ಶಿವಂ ಅಲಿಯಾಸ್ ಸುಧಾಮ ಅಲಿಯಾಸ್ ಚುಚು ಎಂದು ಗುರುತಿಸಲಾಗಿದೆ. ಮೂವರು ಅಪ್ರಾಪ್ತರ ವಯಸ್ಸು ೧೬ ಮತ್ತು ೧೭ ವರ್ಷ ಎಂದು ಪೊಲೀಸರು ತಿಳಿಸಿದ್ದಾರೆ.


























