ನವದೆಹಲಿ,ಆ.೨೦:ರಾಜಧಾನಿ ನವದೆಹಲಿಯ ೫೦ಕ್ಕೂ ಹೆಚ್ಚು ಶಾಲೆಗಳಿಗೆ ಇ-ಮೇಲ್ ಮೂಲಕ ಇಂದು ಬೆಳಿಗ್ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಇದರಿಂದಾಗಿ ಈ ಶಾಲೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ದ್ವಾರಕಾದಲ್ಲಿರುವ ರಾಹುಲ್ ಮಾಡೆಲ್ ಸ್ಕೂಲ್ ಮತ್ತು ಮ್ಯಾಕ್ಸ್‌ಫೋರ್ಟ್ ಸ್ಕೂಲ್, ಮಾಳವಿಯಾ ನಗರದಲ್ಲಿರುವ ಎಸ್‌ಕೆವಿ, ಪ್ರಸಾದ್ ನಗರದಲ್ಲಿರುವ ಆಂಧ್ರ ಸ್ಕೂಲ್ ಸೇರಿದಂತೆ ಇನ್ನಿತರ ಶಾಲೆಗಳಿಗೆ ಇ-ಮೇಲ್‌ಮೂಲಕ ಬಾಂಬ್ ಬೆದರಿಕೆ ಬಂದಿದೆ.
ಇಂದು ಬೆಳಿಗ್ಗೆ ೭-೪೦ ನಿಮಿಷ , ೭-೪೨ ನಿಮಿಷದಲ್ಲಿ ೨ ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ ಎಂದು ದೆಹಲಿ ಅಗ್ನಿ ಶಾಮಕ ಸೇವೆ ಮಾಹಿತಿ ನೀಡಿದೆ.
ಸುದ್ದಿ ತಿಳಿದ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದೊಂದಿಗೆ ಶಾಲೆಯ ಆವರಣಕ್ಕೆ ಭೇಟಿ ನೀಡಿ ಬಿರುಸಿನ ತಪಾಸಣೆ ಕೈಗೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ. ಶಾಲೆಯಿಂದ ಮಕ್ಕಳನ್ನು ಹೊರಗೆ ಕಳುಹಿಸಿ ವ್ಯಾಪಕ ತಪಾಸಣೆ ಕೈಗೊಳ್ಳಲಾಯಿತು. ಆದರೆ, ಎಲ್ಲೂ ಬಾಂಬ್ ಇಟ್ಟಿರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇದೊಂದು ಹುಸಿ ಬೆದರಿಕೆ ಎಂಬುದು ದೃಢಪಟ್ಟಿತು.
ನಿನ್ನೆಯಷ್ಟೆ ದೆಹಲಿಯ ೩೨ ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ರವಾನೆಯಾಗಿತ್ತು. ಪದೇ ಪದೇ ಈ ರೀತಿಯ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗುತ್ತಿರುವುದು, ಇದರಿಂದ ಪೋಷಕರು, ವಿದ್ಯಾರ್ಥಿಗಳು, ಹಾಗೂ ಶಾಲೆಗಳ ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ. ಇ-ಮೇಲ್ ರವಾನಿಸಿದ ವ್ಯಕ್ತಿಯ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.






















