
ಬೀದರ್:ಮಾ.6: ಮಹಾನಗರ ಪಾಲಿಕೆ ಅಡಿಯಲ್ಲಿ ವಿವಿಧ ಯೋಜನೆಗಳಡಿ ಪೂರ್ಣಗೊಳಿಸಿದ ಕಾಮಗಾರಿಗಳ ಬಿಲ್ ಪಾವತಿಯನ್ನು ಹಲವು ತಿಂಗಳಿನಿಂದ ನೀಡದೆ ವಿಳಂಬ ಮಾಡಲಾಗುತ್ತಿದೆ ಎಂದು ಬೀದರ್ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘ ಆರೋಪಿಸಿದೆ.
ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಪಾಲಿಕೆ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಗಿಸಿ ಬಿಲ್ ಸಲ್ಲಿಸಿದ್ದರೂ ಸಹ ಸುಮಾರು ಆರು ತಿಂಗಳಿಂದ ಒಂದು ವರ್ಷವಾದರೂ ಪಾವತಿ ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ.
ಸಣ್ಣ ಗುತ್ತಿಗೆದಾರರು ಸಾಲ ಪಡೆದು ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದರಿಂದ ಈಗ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಂಜಾನ್ ಹಬ್ಬ ಹಾಗೂ ಏಪ್ರಿಲ್ 14ರಂದು ನಡೆಯುವ ಹಬ್ಬದ ಹಿನ್ನೆಲೆ ಗುತ್ತಿಗೆದಾರರಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ ಜಿಲ್ಲಾಧಿಕಾರಿಗಳು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿ ಸಾಧ್ಯವಾದಷ್ಟು ಬೇಗ ಕಾಮಗಾರಿಗಳ ಬಿಲ್ ಪಾವತಿಯನ್ನು ಮಾಡಿಸುವಂತೆ ಗುತ್ತಿಗೆದಾರರ ಸಂಘ ಮನವಿ ಮಾಡಿದೆ.
ಒಂದು ವೇಳೆ 8 ದಿನಗಳೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಂಕೇತಿಕ ಸತ್ಯಾಗ್ರಹ ಧರಣಿ ನಡೆಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬುದ್ಧ ಪ್ರಕಾಶ ಭಾವಿಕಟ್ಟಿ, ಖಜಾಂಚಿ ಮೊಹ್ಮದ್ ನಜೀಮೋದ್ದಿನ್ ಅಂಜುಮ್, ಪ್ರಧಾನ ಕಾರ್ಯದರ್ಶಿ ಮೊಹ್ಮದ್ ಅನ್ವರ್, ಗೌರವಾಧ್ಯಕ್ಷರು ಶಿವಾನಂದ ಕೆ. ಪಾಟೀಲ್, ಮಾಣಿಕೆಶ್ಖಾ ಪಾಟೀಲ್ಜಾ, ಶೇಖ್ ಸಲೀಂ, ಉಪಾಧ್ಯಕ್ಷರು ರಾಜಾರಾಮ ಪಿ. ಚಿಟ್ಟಾ, ಮಹದೇವ ಸ್ವಾಮಿ, ಮಹೇಶ್ ಚಿಂತಾಮಣಿ, ಅಬ್ದುಲ್ ನವೀದ್ ಶೇರಿಕಾರ ಸೇರಿದಂತೆ ಇತರ ಪದಾಧಿಕಾರಿಗಳು ಸಹಿ ಹಾಕಿದ್ದಾರೆ.




















