
ಮಧುಗಿರಿ, ಡಿ. ೧೮- ತಾಲ್ಲೂಕಿನ ಚಿಕ್ಕಮಾಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎನ್‌ಆರ್‌ಇಜಿ ಯೋಜನೆ ಅಡಿಯಲ್ಲಿ ೧೨೦ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, ಕೇವಲ ೪೦ ಕಾಮಗಾರಿಗಳು ಪ್ರಾರಂಭವಾಗಿರುವ ಬಗ್ಗೆ ಜಿ.ಪಂ ಸಿಇಓ ಜಿ. ಪ್ರಭು ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನ ಚಿಕ್ಕಮಾಲೂರು ಗ್ರಾಮ ಪಂಚಾಯಿತಿಗೆ ಜಿ.ಪಂ ಸಿಇಓ ಜಿ. ಪ್ರಭು ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮದಲ್ಲಿ ಕಾಮಗಾರಿ ವಿಳಂಬವಾಗುತ್ತಿದ್ದು, ಉಳಿಕೆ ೮೦ ಕಾಮಗಾರಿಗಳನ್ನು ಶೀಘ್ರದಲ್ಲೇ ಆರಂಭಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೇಟಿ ಸಂದರ್ಭದಲ್ಲಿ ಪಿಡಿಓ ಕಚೇರಿಯಲ್ಲಿ ಇಲ್ಲದೆ ಇರುವುದನ್ನು ಗಮನಿಸಿ ವಿವಿಧ ಕಡತಗಳನ್ನು, ಕ್ರಿಯಾ ಯೋಜನೆಯ ವಿವಿಧ ಕಡತಗಳನ್ನು ಖುದ್ದು ಪರಿಶೀಲಿಸಿದರು. ಸದರಿ ಕಡತಗಳಲ್ಲಿ ಹೆಚ್ಚು ನ್ಯೂನ್ಯತೆಗಳು ಕಂಡು ಬಂದಿದ್ದು, ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದನ್ನು ಗಮನಿಸಿ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಮತ್ತು ಪಿಡಿಓ ಕಾರ್ಯವೈಖರಿ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ತಾ.ಪಂ ಇಓ ಲಕ್ಷ್ಮಣ್ ರವರಿಗೆ ಸೂಚನೆ ನೀಡಿದರು.
ನಂತರ ಸಾರ್ವಜನಿಕರ ಅವಹಾಲನ್ನು ಆಲಿಸಿ ಸೂಕ್ತ ಕ್ರಮವಹಿಸಲು ಸೂಚಿಸಲಾಯಿತು. ಸಾರ್ವಜನಿಕರು ಪಂಚಾಯ್ತಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅನೇಕ ದೂರುಗಳನ್ನು ಸಲ್ಲಿಸಿದರು. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಂಪಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಖುದ್ದು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು. ನಂತರ ಪುರವರ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ರಸ್ತೆ ಅಗಲೀಕರಣದ ಬಗ್ಗೆ ಪರಿಶೀಲನೆ ನಡೆಸಿದರು.
ಗ್ರಾಮದ ಮನೆಗಳಲ್ಲಿ ಶೌಚಾಲಯ ನಿರ್ಮಿಸಲು ಕಾರ್ಯಾದೇಶ ಪತ್ರ ನೀಡದೇ ಇರುವುದನ್ನು ಗಮನಿಸಿ ಕೂಡಲೇ ಕಾರ್ಯಾದೇಶ ಪತ್ರ ನೀಡುವಂತೆ ಹಾಗೂ ೧೫ ನೇ ಹಣಕಾಸು ಮತ್ತು ವರ್ಗವೊಂದರ ಅನುದಾನದ ಕ್ರಿಯಾಯೋಜನೆ ಪರಿಶೀಲಿಸಿ ತಕ್ಷಣ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಿದರು.
ಚಿಕ್ಕಮಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಭೇಟಿ ನೀಡಿ ಮಕ್ಕಳು ಪಾಠಗಳನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಓದುವ ವಿದ್ಯಾಭ್ಯಾಸ ಕ್ರಮವನ್ನು ಮಕ್ಕಳಿಗೆ ತಿಳಿಸಲಾಯಿತು.
ಮುಖ್ಯ ಶಿಕ್ಷಕರಿಗೆ ಮಕ್ಕಳ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಯಿತು ಮತ್ತು ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೂಕ್ತ ಕ್ರಮವಹಿಸುವಂತೆ ತಾ.ಪಂ ಇಓ ಗೆ ಸೂಚಿಸಲಾಯಿತು.
ನಂತರ ಹೋಬಳಿ ಕೇಂದ್ರ ಪಂಚಾಯಿತಿಗಳಾದ ಪುರವರ ಗ್ರಾಮ ಪಂಚಾಯತಿ ಮತ್ತು ತೋವಿನಕೆರೆ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಕುರಿತು ನೀಲ ನಕ್ಷೆಯೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಇಓ ಲಕ್ಷ್ಮಣ್, ಯೋಜನಾಧಿಕಾರಿ ಧನಂಜಯ್ ಮತ್ತಿತರರು ಉಪಸ್ಥಿತರಿದ್ದರು.


























