
ಕಲಬುರಗಿ: ನ.12:ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ಮುಂಗಾರು ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರ ಘೋಷಣೆ ಮಾಡಿ ತಿಂಗಳುಗಳೇ ಕಳೆದರೂ ಇನ್ನು ಪರಿಹಾರ ನೀಡದೆ ರೈತರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಬಾರಿ ಭಾರಿ ಮಳೆಯಾಗಿ ಹೆಸರು,ಉದ್ದು, ಎಳ್ಳು ಕೈ ಕೊಟ್ಟಿವೆ.ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಾಗಿದೆ.ಜಿಲ್ಲೆಯ ಪ್ರಮುಖ ತೊಗರಿ ಬೆಳೆ ಮಳೆಯಿಂದ ತತ್ತರಿಸಿದೆ.ಮೇಲಿಂದ ಮಂಜಿನ ಹನಿಗಳಿಂದ ಕೀಟಗಳು ಆವರಿಸಿಕೊಂಡಿದೆ.ಇದಕ್ಕೆ ರೈತರು ಕೀಟನಾಶಕ ಔಷಧಿಗಳಿಗಾಗಿ ಸಾವಿರಾರು ರುಪಾಯಿ ಖರ್ಚು ಮಾಡಿದ್ದಾರೆ.ಇದರಿಂದ ರೈತರಿಗೆ ಮತ್ತಷ್ಟು ಹೊಡೆತ ಬಿದ್ದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಗೆ ಈಗಾಗಲೇ ಬೆಳೆ ಪರಿಹಾರ ಹಣ ಹೆಕ್ಟೇರ್ ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ 17 ಸಾವಿರ ರೂಪಾಯಿ ರೈತರ ಖಾತೆಗೆ ನೇರವಾಗಿ ಜಮಾ ಆಗುವಂತೆ ಅನುಮೋದನೆ ನೀಡಿಲಾಗಿದೆ.ಇದಕ್ಕಾಗಿ ಕೇಂದ್ರ ಸರ್ಕಾರ 363 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ.ಆದರೆ ಈ ವರೆಗೂ ರೈತರ ಖಾತೆಗೆ ಹಣ ಜಮಾ ಆಗಿಲ್ಲ.ಬಿತ್ತನೆ ಬೀಜ ಮತ್ತು ರಸಗೊಬ್ಬರ ಹಾಗೂ ಕೀಟನಾಶಕಗಳ ಔಷಧಗಳು ಸೇರಿದಂತೆ ಎಕರೆಗೆ 25 ಸಾವಿರ ರೂಪಾಯಿ ಖರ್ಚಾಗಿದೆ.ಪರಿಸ್ಥಿತಿ ಬಿಗಡಾಯಿಸುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ, ಕೇಂದ್ರದ ಪರಿಹಾರಕ್ಕೆ ಕಾಯದೇ ಕೂಡಲೆ ಹೆಕ್ಟೇರ್ ಗೆ 17 ಸಾವಿರ ರೂಪಾಯಿ ಪರಿಹಾರ ನೀಡಿ ರೈತರ ನೆರವಿಗೆ ಧಾವಿಸಬೇಕು.ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಒಂದು ಟನ್ ಕಬ್ಬಿಗೆ 3500 ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

























