ಉದ್ಯಾನವನ ಲೋಕಾರ್ಪಣೆ

ಬಾಗಲಕೋಟೆ, ಆ,19: ಐತಿಹಾಸಿಕ ಮುಚಖಂಡಿ ಕೆರೆಯ ಮುಂಭಾಗದಲ್ಲಿ ಅಂದಾಜು 5.80 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಉದ್ಯಾನವನವನ್ನು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಉದ್ಘಾಟಿಸಿದರು.


ನಗರಾಭಿವೃದ್ದಿ ಪ್ರಾಧಿಕಾರದ ಕೆರೆ ಅಭಿವೃದ್ದಿ ಶುಲ್ಕದಲ್ಲಿ ನಿರ್ಮಿಸಲಾದ ಮುಚಖಂಡಿ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಭಿವೃದ್ದಿ ಕೆಲಸ ಬಂದಾಗ ಪಕ್ಷಬೇದ ಮಾಡದೇ ಜನರ ಪರವಾಗಿ ಕೆಲಸ ಮಾಡಲಾಗುತ್ತದೆ. ಈ ಉದ್ಯಾನವನವನ್ನು ಇನ್ನಷ್ಟು ಅಭಿವೃದ್ದಿಪಡಿಸಲು ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು. ಈ ಭಾಗಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತಾಗಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟೆ ಶಾಸಕ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಾಯ್. ಮೇಟಿ ಮಾತನಾಡಿ ಆಲಮಟ್ಟಿಯಲ್ಲಿ ನಿರ್ಮಿಸಲಾದ ಸಂಗೀತ ಕಾರಂಜಿ ಮಾದರಿಯಲ್ಲಿ ಮುಖಚಂಡಿ ಉದ್ಯಾನವನದಲ್ಲಿ ವ್ಯವಸ್ಥೆ ಮಾಡಬೇಕು. ಈ ಕ್ಷೇತ್ರ ಪ್ರವಾಸಿ ತಾಣವಾಗಿ ಬೆಳೆಯಲು ಎಲ್ಲ ರೀತಿಯ ಕ್ರಮಕೈಗೊಳ್ಳಲು ತಿಳಿಸಿದರು. ವಾರದಲ್ಲಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸುವ ಕೆಲಸವಾಗಬೇಕು ಎಂದರು.


ನಗರಸಭೆ ಪೌರಾಯುಕ್ತರು ಹಾಗೂ ಬುಡಾದ ಆಯುಕ್ತರಾದ ವಾಸಣ್ಣ ಆರ್. ಮಾತನಾಡಿ ಉದ್ಯಾನವನದಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ನೀರಿನ ಕಾರಂಜಿ, ವಿಶ್ರಾಂತಿ ತಂಗುದಾಣ, ಬಯಲುರಂಗ ಮಂದಿರ, ಮಕ್ಕಳ ಆಟಿಕೆಗಳು ಹಾಗೂ ಪ್ರೇಕ್ಷಕರ ಗ್ಯಾಲರಿಗಳನ್ನು ಮಾಡಲಾಗಿದೆ. ಮುಂದಿನ ವಾರದಿಂದ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಮುಚಖಂಡಿ ಗ್ರಾಮ ಪಂಚಾಯತ ಅಧ್ಯಕ್ಷ ರಂಗಪ್ಪ ಪೂಜಾರಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಿ.ಪಂ ಸಿಇಓ ಶಶಿಧರ ಕುರೇರ, ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ ಸೇರಿದಂತೆ ಇತರರು ಉಪಸ್ಥಿತರಿದ್ದರು.