Home ಜಿಲ್ಲೆ ಸಂವಿಧಾನ ಮೌಲ್ಯಗಳ ರಕ್ಷಣೆಗೆ ಸಂಘಟಿತ ಹೋರಾಟಕ್ಕೆ ಘೋಷಣೆ

ಸಂವಿಧಾನ ಮೌಲ್ಯಗಳ ರಕ್ಷಣೆಗೆ ಸಂಘಟಿತ ಹೋರಾಟಕ್ಕೆ ಘೋಷಣೆ

ಯಾದಗಿರಿ:ಫೆ.೨೩: ವಡಗೇರಾ ತಾಲೂಕು ಮಾಲಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ವತಿಯಿಂದ ಗ್ರಾಮ ಘಟಕದ ಪುನರ್‌ರಚನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭವು ಉತ್ಸಾಹಭರಿತ ಹಾಗೂ ಹೋರಾಟದ ಮನೋಭಾವದ ನಡುವೆ ಜರುಗಿತು. ವಿವಿಧ ಸಮುದಾಯಗಳ ಪ್ರತಿನಿಧಿಗಳು, ಯುವಜನತೆ ಮತ್ತು ಮಹಿಳೆಯರ ಸಕ್ರಿಯ ಹಾಜರಾತಿ ಕಾರ್ಯಕ್ರಮಕ್ಕೆ ಚೈತನ್ಯ ತುಂಬಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ಅವರು, ಗ್ರಾಮೀಣ ಮಟ್ಟದಲ್ಲಿ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಸಂಘಟಿತ ಶಕ್ತಿ ನಿರ್ಮಾಣ ಅಗತ್ಯವೆಂದು ಪ್ರತಿಪಾದಿಸಿದರು. “ಸಂವಿಧಾನಾತ್ಮಕ ಹಕ್ಕುಗಳ ಅನುಷ್ಠಾನ ಕಾಗದದಲ್ಲೇ ಸೀಮಿತವಾಗಬಾರದು; ಅದು ಗ್ರಾಮಗಳ ಅಂಗಳಕ್ಕೆ ತಲುಪಬೇಕು. ಅದರಿಗಾಗಿ ಗ್ರಾಮ ಘಟಕಗಳು ಚಳವಳಿಯ ಕೇಂದ್ರಬಿAದುಗಳಾಗಬೇಕು” ಎಂದು ಅವರು ಹೇಳಿದರು.
ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಶರಣರ ನಾಡಿನಲ್ಲಿ ಕೋಮುವಾದಿ ಹಾಗೂ ಜಾತಿವಾದಿ ಮನೋಭಾವಗಳಿಗೆ ಅವಕಾಶ ಕೊಡಬಾರದು. ಸಂಘಟಿತ ಹೋರಾಟದ ಮೂಲಕವೇ ಸಮಾಜದಲ್ಲಿ ಸಮಾನತೆ ಮತ್ತು ಸ್ವಾಭಿಮಾನ ಬೇರೂರಬಹುದು ಎಂದು ಅವರು ಅಭಿಪ್ರಾಯಪಟ್ಟರು. ಮಹಿಳೆಯರು ಶಿಕ್ಷಣ, ಜಾಗೃತಿ ಮತ್ತು ಆರ್ಥಿಕ ಸ್ವಾವಲಂಬನೆಯ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಕರೆ ನೀಡಿದರು.
ಹತ್ತೀಗೂಡೂರು ಶರಣರೆಡ್ಡಿ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವೇಶ್ವರರು ಅನುಭವ ಮಂಟಪದ ಮೂಲಕ ಸಮಾನತೆಯ ಸಿದ್ಧಾಂತವನ್ನು ಪ್ರಚಾರಗೊಳಿಸಿ ಅಸ್ಪೃಶ್ಯತೆ ವಿರುದ್ಧ ಸಾಮಾಜಿಕ ಕ್ರಾಂತಿ ನಡೆಸಿದರು ಎಂದು ಸ್ಮರಿಸಿದರು. ನಂತರ ಃ. ಖ. ಂmbeಜಞಚಿಡಿ ಅವರ ಸಂವಿಧಾನ ರಚನೆಯ ಮಹತ್ವವನ್ನು ವಿವರಿಸಿ, “ಸಮಾನತೆ, ಸಮಬಾಳು ಮತ್ತು ನ್ಯಾಯದ ಮೌಲ್ಯಗಳು ನಮ್ಮ ಬದುಕಿನ ಅಸ್ತಿವಾರ. ಅವುಗಳನ್ನು ಕಾಪಾಡುವುದು ನಮ್ಮ ಸಾಮೂಹಿಕ ಜವಾಬ್ದಾರಿ” ಎಂದರು.
ರಾಜ್ಯಾಧ್ಯಕ್ಷರ ಮಾರ್ಗದರ್ಶನದಂತೆ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಾಮಪ್ಪ ಹಲಕಲ್, ಉಪಾಧ್ಯಕ್ಷರಾಗಿ ಅಮಾತ್ಯಪ್ಪ ಕುರುಕುಂದಿ, ಕಾರ್ಯದರ್ಶಿಯಾಗಿ ಬಾಲಪ್ಪ ಲಿಂಗೇರಿ, ಸಂಘಟನೆ ಕಾರ್ಯದರ್ಶಿಯಾಗಿ ಹಣಮಂತ ಶಾಖ ಹಾಗೂ ಖಜಾಂಚಿಯಾಗಿ ಮಲ್ಲಿಕಾರ್ಜುನ ದೊಡ್ಮನಿ ಆಯ್ಕೆಯಾದರು. ಜೊತೆಗೆ ಹಲವಾರು ಕಾರ್ಯಕರ್ತರನ್ನು ಸಂಘಟನಾ ಸದಸ್ಯರಾಗಿ ನೇಮಕ ಮಾಡಲಾಯಿತು.
ಭೀಮನಗೌಡ ಮಾಲಿಪಾಟೀಲ್, ಹನುಮಂತ ಕೊಂಗAಡಿ, ಸಿದ್ದಪ್ಪ ಹೊಸ್ಮನಿ ಸೇರಿದಂತೆ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಘಟನೆಯ ಬಲವರ್ಧನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಗ್ರಾಮೀಣ ಮಟ್ಟದಲ್ಲಿ ಶೋಷಣೆ, ದಬ್ಬಾಳಿಕೆ ಮತ್ತು ಸಾಮಾಜಿಕ ಬಹಿಷ್ಕಾರಗಳ ವಿರುದ್ಧ ಸಮಗ್ರ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಕಾರ್ಯಕ್ರಮವು ಸಂಘಟಿತ ಚಳವಳಿಗೆ ಹೊಸ ದಿಕ್ಕು ನೀಡುವ ಘಟ್ಟವಾಗಿ ಪರಿಣಮಿಸಿತು.