
ಅಥಣಿ :ಜ.15: ತಾಲೂಕ ಆಡಳಿತದಿಂದ ಬರುವ ಜನವರಿ 26ರಂದು ಆಚರಿಸಲಾಗುವ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭವನ್ನು ಜಿಲ್ಲಾ ಆಡಳಿತದ ನಿರ್ದೇಶನದಂತೆ ಅಥಣಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಆಚರಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ತಹಸೀಲ್ದಾರ್ ಸಿದ್ದರಾಯ ಬೋಸಗಿ ಹೇಳಿದರು.
ಅವರು ಸೋಮವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿ ಗಣರಾಜ್ಯೋತ್ಸವ ಹಾಗೂ ವಿವಿಧ ಜಯಂತಿಗಳ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ವರ್ಷದಂತೆ ಈ ಬಾರಿ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಧ್ವಜಸ್ತಂಭ, ವೇದಿಕೆಯ ಸಿದ್ಧತೆ, ಪೆಂಡಾಲ್ ಮತ್ತು ಆಸನಗಳ ವ್ಯವಸ್ಥೆ, ಶಾಲಾ ಮಕ್ಕಳಿಗೆ ಉಪಹಾರ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ನಮ್ಮ ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಗಳನ್ನು ವಹಿಸಿಕೊಂಡು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರು.
ರಾಷ್ಟ್ರೀಯ ಹಬ್ಬದ ಕಾರ್ಯಕ್ರಮ ಜರುಗುವ ಭೋಜರಾಜ ಕ್ರೀಡಾಂಗಣದ ಸ್ಥಳದಲ್ಲಿ ಹಾಗೂ ಶಾಲಾ ಮಕ್ಕಳ ಪ್ರಭಾತ ಫೇರಿ ಸಂಚರಿಸುವ ಮಾರ್ಗದಲ್ಲಿ ಸ್ವಚ್ಛಗೊಳಿಸಬೇಕು. ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಮುಂಚಿತವಾಗಿ ತೆರೆಯುವಂತೆ ವ್ಯಾಪಾರಸ್ಥರಿಗೆ ತಿಳುವಳಿಕೆ ನೀಡಬೇಕು. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಅಲಂಕಾರ ಮಾಡುವುದರ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಮಹಾತ್ಮರ ಪುತ್ತಳಿಗೆ ಮಾಲಾರ್ಪಣೆ ಮಾಡುವಂತೆ ಪುರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಬೆಳಿಗ್ಗೆ 7:00 ಒಳಗಾಗಿ ತಮ್ಮ ಕಾರ್ಯಾಲಯದ ಧ್ವಜಾರೋಹಣ ಮುಗಿಸಿಕೊಂಡು, 8 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಪ್ರಭಾತ್ ಫೇರಿ ಮೆರವಣಿಗೆ ಆರಂಭಗೊಂಡು 9 ಗಂಟೆಗೆ ಭೋಜರಾಜ ಕ್ರೀಡಾಂಗಣದಲ್ಲಿ ಸಮಾರೋಪಗೊಂಡು ಶಾಸಕರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಧ್ವಜಾರೋಹಣ ಹಾಗೂ ವೇದಿಕೆ ಕಾರ್ಯಕ್ರಮಗಳು ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ತಾಲೂಕ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ-ಕಾಲೇಜುಗಳ ಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜಿ, ಸಿಪಿಐ.ಸಂತೋಷ್ ಹಳ್ಳೂರ, ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ವೆಂಕಟೇಶ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ ಸೌಂದಲಗೀಕರ. ಕೃಷಿ ಇಲಾಖೆಯ ಅಧಿಕಾರಿ ನಿಂಗನಗೌಡ ಬಿರಾದರ, ಗ್ರಾಮ ಆಡಳಿತ ಅಧಿಕಾರಿ ಎಂ ಎಂ ಮಿರ್ಜಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.






















