ಕಲಬುರಗಿ :ಅ.4: ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೆಳನವನ್ನು ಬರುವ ಸೆಪ್ಟೆಂಬರ್ ಮೊದಲ ವಾರದಲ್ಲಿ ನಗರದಲ್ಲಿ ನಡೆಸಲು ತಾಲೂಕಾ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಶಿವಲೀಲಾ ಎಸ್ ಕಲಗುರ್ಕಿ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ನಡೆಸಿದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅರ್ಥಪೂರ್ಣ ಸಮ್ಮೇಳನವನ್ನು ನಡೆಸಲು ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ವೈವಿಧ್ಯಮಯ ಸಮ್ಮೇಳನ ನಡೆಸಲೂ ಕೂಡ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಮ್ಮೇಳನ ಕೇವಲ ಸಾಂಕೇತಿಕವಾಗಿರದೇ ಈ ನೆಲ-ಜಲ, ಭಾಷೆ ಮತ್ತು ಸಂಸ್ಕøತಿಯ ಕುರಿತು ಚಿಂಥನ ಮಂಥನ ನಡೆಸುವಂತಾಗುವ ನಿಟ್ಟಿನಲ್ಲಿ ಸಮ್ಮೇಳನ ರೂಪಿಸಲಾಗುತ್ತಿದೆ. ಇಂದಿನ ಜಾಗತೀಕರಣದ ಪರಿಣಾಮ ನಮ್ಮ ಭಾಷೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮ ಕನ್ನಡ ಭಾಷೆ ಕಟ್ಟುವುದು ಮತ್ತು ಅದನ್ನು ಸದೃಢಗೊಳಿಸುವತ್ತ ವಿಶೇಷ ಗಮನ ಕೊಡಬೇಕಿದೆ. ಈ ದಿಸೆಯಲ್ಲಿ ನಮ್ಮ ಸಮ್ಮೇಳನ ಅದಕ್ಕೆ ಪ್ರೇರಣೆ ಕೊಡಲಿದೆ ಎಂದು ಆಶಾಭಾವನೆ ಹೊಂದಲಾಗಿದೆ ಎಂದು ತಾಲೂಕಾಧ್ಯಕ್ಷ ಶಿವಲೀಲಾ ಕಲಗುರ್ಕಿ ಅವರು ವಿವರಿಸಿದರು.
ಸಭೆಯ ನೇತೃತ್ವ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕನ್ನಡ ನಾಡಿನ ಇತಿಹಾಸ ಹಾಗೂ ಸಾಹಿತ್ಯಕ ಮತ್ತು ಸಾಂಸ್ಕøತಿಕವಾಗಿ ಜಿಲ್ಲೆಯ ಸಂಪತ್ತು ಅಪಾರವಾದದ್ದು. ಇಲ್ಲಿ ಭಾಷೆ, ನೆಲ, ಜಲವನ್ನು ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಜರುಗಲಿ ಎಂದು ಸಲಹೆ ನೀಡಿದರು.
ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಡಾ. ಬಿ.ಎ. ಪಾಟೀಲ, ತಾಲೂಕಾ ಘಟಕದ ಪದಾಧಿಕಾರಿಗಳಾದ ವಿಶಾಲಾಕ್ಷಿ ಮಾಯಣ್ಣನವರ್, ಮಲ್ಲಿಕಾರ್ಜುನ ಇಬ್ರಾಹಿಂಪುರ, ಕೋಶಾಧ್ಯಕ್ಷ ಕುಪೇಂದ್ರ ಬರಗಾಲಿ, ಪ್ರಭವ ಪಟ್ಟಣಕರ್, ಈರಣ್ಣ ಸೋನಾರ, ಸುನೀತಾ ಮಾಳಗಿ, ಚಂದ್ರಕಾಂತ ಸೂರನ್, ಶರಣು ಹಾಗರಗುಂಡಗಿ, ಕುಶಾಲ ಧರ್ಗಿ, ಕವಿತಾ ಕಾವಳೆ, ರೇವಯ್ಯಾ ಸ್ವಾಮಿ ಸರಡಗಿ, ಲಲೀತಾ, ಭಾಗ್ಯಶ್ರೀ ಮರಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.























