Home ಜಿಲ್ಲೆ ತುಮಕೂರು ಅಡುಗೆ ಸಹಾಯಕಿ ಸಾವು: ಸಿಎಂ ನಿಧಿಯಿಂದ ಪರಿಹಾರಕ್ಕೆ ಜೆಸಿಎಂ ಒತ್ತಾಯ

ಅಡುಗೆ ಸಹಾಯಕಿ ಸಾವು: ಸಿಎಂ ನಿಧಿಯಿಂದ ಪರಿಹಾರಕ್ಕೆ ಜೆಸಿಎಂ ಒತ್ತಾಯ

ಚಿಕ್ಕನಾಯಕನಹಳ್ಳಿ, ಅ. ೨- ಕಂದಿಕೆರೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಡುಗೆ ಸಹಾಯಕಿ ಲತಾಮಣಿ (೩೦) ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ್ದು, ಇವರ ಕುಟುಂಬಕ್ಕೆ ಮುಖ್ಯಮಂತ್ರಿ ನಿಧಿಯಿಂದ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಒತ್ತಾಯಿಸಿದ್ದಾರೆ.


ತಾಲ್ಲೂಕಿನ ಕಂದಿಕೆರೆ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಅಡುಗೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲತಾಮಣಿ ಶಾಲೆಯ ಅಡುಗೆ ಕೊಣೆಯಲ್ಲಿ ಬೆಂಕಿ ತಗುಲಿ ಗಾಯಗೊಂಡಿದ್ದರು. ಗಾಂಯಗೊಂಡ ಅವರನ್ನ ಚಿನಾಹಳ್ಳಿ ಸರ್ಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಪಡೆದು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಗ್ನಿ ಅವಘಡದ ಬಗ್ಗೆ ಚಿನಾಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಗ್ರಾಮಕ್ಕೆ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಭೇಟಿ ನೀಡಿ ಪಾರ್ಥೀವ ಶರೀರ ದರ್ಶನ ಪಡೆದು ಮೃತರ ಕುಟುಂಬಕ್ಕೆ ಧೈರ್ಯ ಹೇಳಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ. ಲತಾಮಣಿ ಸಾವು ದುರಂತ. ಮೃತರು ಕಳೆದ ಒಂದೂವರೆ ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಇವರ ಪುತ್ರ ೯ನೇ ತರಗತಿ ಹಾಗೂ ಪುತ್ರಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳು ತಂದೆ ತಾಯಿಲ್ಲದೆ ತಬ್ಬಲಿಯಾಗಿರುವುದು ತುಂಬಾ ನೋವು ತಂದಿದೆ ಎಂದರು.


ಈ ಕುಟುಂಬದ ನಿರ್ವಹಣೆಯನ್ನು ಲತಾಮಣಿ ನಿಭಾಯಿಸುತ್ತಿದ್ದರು. ಅವರ ಸಾವಿನ ಘಟನೆಯಿಂದ ಕುಟುಂಬಕ್ಕೆ ತುಂಬಾ ನಷ್ಟ ಉಂಟಾಗಿದೆ. ಆದ್ದರಿಂದ ಮುಖ್ಯಮಂತ್ರಿ ನಿಧಿಯಿಂದ ಪರಿಹಾರ ನೀಡಬೇಕೆಂದು ಒತ್ತಾಯಿಸಿ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಹಾಗೂ ಜಿಲ್ಲಾಧಿಕಾರಿಗೆ ಕರೆ ಮಾಡಿ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರಿಗೂ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯ ತರುವಂತೆ ಹೇಳಿದ್ದೇನೆ ಎಂದರು.


ಕಂದಿಕೆರೆ ಗ್ರಾಮದಲ್ಲಿ ಮೃತರ ಅಂತ್ಯಸಂಸ್ಕಾರ ನಡೆಯಿತು. ತಹಶೀಲ್ದಾರ್ ಮಮತ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಸುಧಾಕರ್, ಬಿಇಒ ಕಾಂತರಾಜು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.