ಸಮಸ್ಯೆಗೆ ಸಾವು ಪರಿಹಾರವಲ್ಲ, ತಾಳ್ಮೆಯಿಂದ ಎದುರಿಸಬೇಕು

ಕಲಬುರಗಿ :ಸೆ.11: ಸಾಲ, ವೈಯಕ್ತಿಕ ಕಾರಣಗಳು, ಪ್ರೇಮ ವೈಫಲ್ಯ, ಪರೀಕ್ಷೆಗಳಲ್ಲಿ ಅನುತ್ತೀರ್ಣ, ಕೌಟುಂಬಿಕ ಕಲಹ, ಖಿನ್ನತೆ ಸೇರಿದಂತೆ ಮತ್ತಿತರ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಜರುಗುತ್ತಿವೆ. ಸಮಸ್ಯೆಗೆ ಸಾವು ಪರಿಹಾರವಲ್ಲ. ತಾಳ್ಮೆಯಿಂದ ಸಮಸ್ಯೆಯನ್ನು ಎದುರಿಸಬೇಕು ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪವಿರುವ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಿದ್ದ “ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ” ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿಶೇಷವಾಗಿ ಮಹಿಳೆಯರು, ರೈತರು ಮತ್ತು ವಿದ್ಯಾರ್ಥಿ ಸಮೂಹ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಜೀವನದಲ್ಲಿ ಬರುವ ಯಾವುದೇ ಸಮಸ್ಯೆಯನ್ನು ಧೈರ್ಯದಿಂದ ಎದುರಿಸಬೇಕು. ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಆಪ್ತ ಸಮಾಲೋಚನೆ, ಸತ್ಸಂಗ, ಧನಾತ್ಮಕ ಚಿಂತನೆ, ಯೋಗ, ಧ್ಯಾನ ಮಾಡಬೇಕು. ಇರುವುದರಲ್ಲಿಯೇ ತೃಪ್ತಿಯಿಂದ ಇರುವುದು ಕಲಿಯಬೇಕು ಎಂದು ಮಾರ್ಮಿಕವಾಗಿ ನುಡಿದರು. ವಿಶ್ವದಲ್ಲಿ ಪ್ರತಿವರ್ಷ 10 ಲಕ್ಷ ಜನರು ಮತ್ತು ನಮ್ಮ ದೇಶದಲ್ಲಿ ಪ್ರತಿ 4 ನಿಮಿಷಗಳಿಗೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಮಕ್ಕಳಿಗೆ ಒತ್ತಡ ಹಾಕುವುದು ಬೇಡ ಎಂದರು. ಕಾರ್ಯಕ್ರಮದಲ್ಲಿ ದತ್ತು ಹಡಪದ, ಶಿವಯೋಗೆಪ್ಪಾ ಎಸ್. ಬಿರಾದಾರ, ಡಾ.ರಾಜಶೇಖರ ಪಾಟೀಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.