
ಬೆಂಗಳೂರು,ಜೂ.೬-ಆರ್‌ಸಿಬಿ ಐಪಿಲ್ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ವೇಳೆ ಉತ್ತರ ವಲಯ ಡಿಸಿಪಿ ಸೈದುಲು ಅಡಾವತ್ ಹಾಗೂ ಅವರ ಅವರ ಇಬ್ಬರು ಅಧೀನ ಅಧಿಕಾರಿಗಳ ದಿಟ್ಟ ಕ್ರಮ ಹಲವು ಮಂದಿಯ ಪ್ರಾಣವನ್ನು ಉಳಿಸಿದೆ.
ಐಪಿಎಲ್ ಗೆದ್ದ ಆರ್‌ಸಿಬಿ ತಂಡದ ಆಟಗಾರರಿಗೆ ವಿಧಾನ ಸೌಧದ ಮೆಟ್ಟಿಲಿನ ಮೇಲೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಸೇರಿ ಬಹುತೇಕರೂ ಭಾಗಿಯಾಗಿದ್ದರು.
ಬಹುತೇಕ ಪೋಲಿಸ್ ಪಡೆಯನ್ನು ವಿಧಾನ ಸೌಧದ ಆವರಣದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಬಳಿಕದ ಕಾರ್ಯಕ್ರಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿ ಆಗಿದ್ದರಿಂದ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಧಾವಿಸಲು ಆರಂಭಿಸಿದ್ದರು. ಆದರೆ, ಗೇಟ್ ೧೭ ಅನ್ನು ಕ್ರೀಡಾಂಗಣದ ಭದ್ರತಾ ಸಿಬ್ಬಂದಿಯೊಬ್ಬರು ಮಾತ್ರ ನಿರ್ವಹಿಸುತ್ತಿದ್ದರು.
ಹೆಚ್ಚುತ್ತಿರುವ ಜನಸಂದಣಿಯನ್ನು ನಿಯಂತ್ರಿಸಲು ಅಲ್ಲಿ ಪೋಲೀಸರೇ ಇರಲಿಲ್ಲ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಕ್ರೀಡಾಂಗಣದ ಒಳಗೆ ನುಗ್ಗಲು ಆರಂಭಿಸಿ ಸುಮಾರು ೫ಸಾವಿರ ಕ್ಕೂ ಅಧಿಕ ಮಂದಿ ಒಂದೇ ಗೇಟ್‌ನಲ್ಲಿ ಜಮಾಯಿಸಿದ್ದರಿಂದ ಪರಿಸ್ಥಿತಿ ಕೈಮೀರುವ ಹಂತ ತಲುಪಿತ್ತು.
ಇತ್ತ ಗೇಟ್ ೧೮ರಲ್ಲಿಯೂ ಅಷ್ಟೇ ಸಂಖ್ಯೆಯ ಜನರು ಸೇರಿದ್ದರು.
ಈ ವೇಳೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದ ಉಪ ಪೊಲೀಸ್ ಆಯುಕ್ತ (ಉತ್ತರ) ಸೈದುಲು ಅದಾವತ್ ಹಾಗೂ ಅವರ ಗನ್ ಮ್ಯಾನ್ ಅಭಿಲಾಷ್ ಮತ್ತು ಆರ್ ಟಿ ನಗರ ಠಾಣೆ ಪೊಲೀಸ್ ಸಬ್-ಇನ್ಸ್ ಪೆಕ್ಟರ್ (ಪಿಎಸ್‌ಐ) ನಟರಾಜ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಒಂದು ಕ್ಷಣವನ್ನೂ ವ್ಯರ್ಥಮಾಡದ ಡಿಸಿಪಿ ಅದಾವತ್ ತಾವೇ ಸ್ವತಃ ಲಾಟಿ ಚಾರ್ಚ್ ಮಾಡಿ ಜನರನ್ನು ಚದುರಿಸಿದ್ದಾರೆ. ಬಳಿಕ ಅವರ ತಂಡದ ಸದಸ್ಯರು ಗುಂಪನ್ನು ಚದುರಿಸಿ ಗೇಟ್ ಅನ್ನು ಬಂದ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಡಿಸಿಪಿ ಮತ್ತು ಅವರ ಸಿಬ್ಬಂದಿ ಜನಸಮೂಹವನ್ನು ಚದುರಿಸಲು ಗೇಟ್ ೧೮ ಮತ್ತು ೧೯ ರ ಕಡೆಗೆ ಲಾಠಿ ಚಾರ್ಜ್ ಮಾಡಿದರು. ಇದರಿಂದಾಗಿ, ಗೇಟ್ ೧೯ ರಲ್ಲಿ ಯಾವುದೇ ಕಾಲ್ತುಳಿತ ಸಂಭವಿಸಲಿಲ್ಲ. ಈ ಮಧ್ಯೆ, ಸುಮಾರು ಐದು ಜನರು ಪ್ರಜ್ಞೆ ತಪ್ಪಿ ಬಿದ್ದಿದ್ದರು ಮತ್ತು ಅವರನ್ನು ಗೇಟ್ ೧೭ ರ ಒಳಗೆ ಚಿಕಿತ್ಸೆ ನೀಡಲಾಯಿತು. ಒಂದು ವೇಳೆ ಡಿಸಿಪಿ ಅದಾಲತ್ ಹಾಗೂ ಅವರ ತಂಡ ದಿಟ್ಟತನ ತೋರದೇ ಇದ್ದಿದ್ದರೆ ಇನ್ನೂ ದೊಡ್ಡ ಘೋರ ದುರಂತಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿ ಆಗುತ್ತಿತ್ತು.
ಪೊಲೀಸ್ ಕೊರತೆ ಮಧ್ಯೆ ಒಂದು ವಿಭಾಗದ ಉಸ್ತುವಾರಿ ಹೊಂದಿರುವ ಹಿರಿಯ ಅಧಿಕಾರಿಯೊಬ್ಬರು ತಾವೇ ಸ್ವತಃ ಕಾರ್ಯಾಚರಣೆಗೆ ಇಳಿದು ತಮ್ಮ ಸುರಕ್ಷತೆಯನ್ನು ಲೆಕ್ಕಿಸದೇ ಕಾರ್ಯ ದಕ್ಷತೆ ಮೆರೆದಿದ್ದಾರೆ. ಈ ಘಟನೆಯಲ್ಲಿ ಡಿಸಿಪಿ ಅದಾವತ್ ಅವರಿಗೂ ಗಾಯಗಳಾಗಿ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.