
ಸಿಎಂ ಅಧಿಕಾರ ಹಂಚಿಕೆ, ಕಿತ್ತಾಟ ಹೈಕಮಾಂಡ್ ಭೇಟಿ ಚರ್ಚೆ
ಬೆಂಗಳೂರು, ಡಿ. ೨೧- ಆಡಳಿತರೂಢ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕಿತ್ತಾಟ ಇನ್ನು ತಣ್ಣಾಗಲಿಲ್ಲ. ಸಚಿವರು, ಶಾಸಕರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಳೆ ದೆಹಲಿಗೆ ತೆರಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಭೇಟಿಯ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿಯಲ್ಲೂ ಚಳಿಗಾಲದ ಅಧಿವೇಶನದಲ್ಲಿ ಅಧಿಕಾರ ಹಂಚಿಕೆ ಕುರಿತಂತೆ ಸಚಿವರು ಮತ್ತು ಮುಖಂಡರು ಬಹಿರಂಗ ಹೇಳಿಕೆಗಳು ನೀಡಿದ್ದರಿಂದ ಪಕ್ಷದಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದವು. ಅಧಿವೇಶನದಲ್ಲಿ ಮುಖ್ಯಮಂತ್ರಿಯವರು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಉತ್ತರ ನೀಡುವಾಗ ಹೈಕಮಾಂಡ್ ನನ್ನ ಪರವಾಗಿದೆ. ತಾವೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುತ್ತೇನೆ. ಅಧಿಕಾರ ಹಂಚಿಕೆ ಕುರಿತು ಯಾವುದೇ ಒಪ್ಪಂದವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಬೆಳವಣಿಗೆಗಳ ನಡುವೆ ಡಿ.ಕೆ. ಶಿವಕುಮಾರ್ ದೆಹಲಿ ಭೇಟಿ ಕೈಗೊಂಡಿದ್ದಾರೆ.
ರಾಜ್ಯದ ನೀರಾವರಿ ವಿಚಾರಕ್ಕೆ ಸಂಬಂಧಿಸಿದಂತೆ ಹಾಗೂ ನ್ಯಾಷನಲ್ ಪ್ರಕರಣದಲ್ಲಿ ಜಾರಿ ನಿದೇಶನಾಲಯ ಸಮನ್ಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಭೇಟಿಯ ಅವಧಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಹೇಳಲಾಗಿದೆ.
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಳೆ ದೆಹಲಿಗೆ ತೆರಳುತ್ತಿದ್ದೇನೆ. ರಾಜ್ಯದ ನೀರಾವರಿ ಮಹದಾಯಿ ಯೋಜನೆಗೆ ಸಂಬಂಧಪಟ್ಟಂತೆ ದೆಹಲಿಯಲ್ಲಿ ಜಲಾಶಕ್ತಿ ಸಚಿವರನ್ನು ಭೇಟಿ ಮಾಡುತ್ತಿದ್ದೇನೆ. ಹಾಗೆಯೇ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡುವುದಾಗಿ ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಮೇಕೆದಾಟು ಯೋಜನೆ ಕುರಿತಂತೆ ಕಾಮಗಾರಿ ಆರಂಭ ಕುರಿತು ಸಿದ್ಧತೆಗಳು ನಡೆಯುತ್ತಿವೆ ಎಂದರು.
ಯಾವುದೇ ಗೊಂದಲವಿಲ್ಲ
ಅಧಿಕಾರ ಹಂಚಿಕೆ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಎಲ್ಲವೂ ಮಾಧ್ಯಮ ಸೃಷ್ಟಿಯಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಿನ್ನೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಭೇಟಿ ಮಾಡಿರುವ ಕುರಿತು ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸೌಹಾರ್ದಯುತವಾಗಿ ರಾಜಣ್ಣ ಅವರನ್ನು ಭೇಟಿ ಮಾಡಿದ್ದೇನೆ. ಅವರು ಪಕ್ಷದ ಸಹೋದ್ಯೋಗಿಯಾಗಿದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ ಎಂದರು.
ರಾಜಣ್ಣ ಅವರ ಬಗ್ಗೆ ಭಿನ್ನಭಿಪ್ರಾಯವಿಲ್ಲ. ಕೆಲವೊಂದು ಸಂದರ್ಭದಲ್ಲಿ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಆ ಬಗ್ಗೆ ಬೇಜಾರು ಮಾಡಿಕೊಳ್ಳುವ ಅಗತ್ಯವಿಲ್ಲ. ತಾವು ಯಾರ ಬಳಿಯು ಜಗಳವಾಡಿಲ್ಲ. ತಾವು ಎಲ್ಲರೊಂದಿಗೂ ಚೆನ್ನಾಗಿದ್ದೇನೆ. ಈ ಹಿಂದೆ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ರಾಜಣ್ಣಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದೆ. ಅವರು ಸಿಎಂ ಆಪ್ತ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ತಾವು ಕೂಡ ಸಿಎಂ ಆಪ್ತರೆ, ಎಲ್ಲರೂ ಆಗುತ್ತಾರೆ. ಇವೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದರು.
ಡಿ. ೨೭ ರಂದು ನವದೆಹಲಿಯಲ್ಲಿ ಕಾಂಗ್ರೆಸ್ ಕಾರ್‍ಯಕಾರ್ಯ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ದೆಹಲಿಗೆ ತೆರಳಿಲಿದ್ದಾರೆ.
ಮೂಲಗಳ ಪ್ರಕಾರ ಅಧಿಕಾರ ಹಂಚಿಕೆ ಕುರಿತಂತೆ ರಾಜ್ಯ ರಾಜಕಾರಣದಲ್ಲಿ ಗೊಂದಲಗಳು ಮುಂದುವರೆದಿರುವ ಹಿನ್ನೆಲೆಯಲ್ಲಿ ದೆಹಲಿ ಭೇಟಿ ವೇಳೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ, ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರಿ ಹಂಚಿಕೆ ಕುರಿತಂತೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಮುಖ್ಯಮಂತ್ರಿಗಳು ಈ ಹಿಂದೆ ಹಲವು ಬಾರಿ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಆದರೆ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ತಾವು ಸಿದ್ದರಾಮಯ್ಯ ಪರ ರಾಜಣ್ಣ
ನಾನು ಯಾವಾಗಲೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಪರವೇ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಏನೇ ಪ್ರಯತ್ನ ಮಾಡಿದ್ರೂ ನನ್ನ ನಿಲುವು ಬದಲಾಗಲ್ಲ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ಈ ಹಿಂದೆ ನೀಡಿದ್ದ ಹೇಳಿಕೆಗಳಿಗೆ ಈಗಲೂ ಬದ್ಧ ಎಂದು ಅವರು ಪುನರುಚ್ಚರಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ವಿಚಾರಕ್ಕೆ ಇಂದು ಮಾತನಾಡಿದ ಅವರು, ನಾನು ಯಾವುದಕ್ಕೂ ರಾಜಿ ಆಗಲ್ಲ, ಹಿಂದೆ ಆಡಿದ ಮಾತಿಗೆ ಈಗಲೂ ಬದ್ಧ. ನಾನು ಯಾವಾಗಲೂ ಸಿದ್ದರಾಮಯ್ಯ ಪರವೇ ಎಂದು ಸ್ಪಷ್ಟಪಡಿಸಿದ್ದಾರೆ.
ಡಿಕೆ ಶಿವಕುಮಾರ್ ಭೇಟಿ ಮಾಡಿದ್ದರು. ಅವರೇನು ಹುಡಿಕಿಕೊಂಡು ಬಂದಿರಲಿಲ್ಲ. ಅವರು ಪಾರ್ಟಿ ಅಧ್ಯಕ್ಷರು ಮಾತಾಡ್ತಾರೆ. ಯಾರನ್ನೂ ಬೇಕಾದ್ರು ಮಾತಾಡಿಸಬಹುದು. ಪಕ್ಷ ಸಂಘಟನೆ ವಿಚಾರವಾಗಿ ಭೇಟಿ ಮಾಡಿದ್ದರು. ಪಕ್ಷ ಸಂಘಟನೆ ಮಾಡೋಣ ಅಂದರು, ನಾನು ಆಯ್ತು ಅಂದೆ. ಅದರ ಹೊರತಾಗಿ ಬೇರೆ ಯಾವುದೇ ವಿಚಾರಗಳು ಚರ್ಚೆ ಆಗಿಲ್ಲ ಅಂತ ಹೇಳಿದ್ದಾರೆ.
ನಮ್ಮ ನಿಲುವು ಸಿದ್ದರಾಮಯ್ಯ ಪರವಾಗಿಯೇ ಇದೆ. ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಮನೆಗೆ ಎಲ್ಲರೂ ಊಟಕ್ಕೆ ಹೋಗಿದ್ದರು. ಅದು ರಾಜಕೀಯ ಅಲ್ಲ. ಅದೊಂದು ಸೌಜನ್ಯಕ್ಕೆ ಅಷ್ಟೆ. ಸಿಎಂ ವಿಚಾರವನ್ನ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಸಿಎಂ ಕೂಡ ನಾನೇ ೫ ವರ್ಷ ಇರ್ತೀನಿ ಅಂತ ಪದೇ ಪದೇ ಹೇಳಿದ್ದಾರೆ. ಹೈಕಮಾಂಡ್ ಹೇಳೋವರೆಗೆ ನಾನು ಕಾಯ್ತೀನಿ ಎಂದು ತಿಳಿಸಿದ್ದಾರೆ.
ನಾನು ಹಿಂದೆ ಹೇಳಿದ ಎಲ್ಲಾ ಹೇಳಿಕೆಗೆ ಬದ್ಧ. ನಾನು ಸಿದ್ದರಾಮಯ್ಯ ಪರವೇ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಡಿ.ಕೆ ಶಿವಕುಮಾರ್ ಏನೇ ಪ್ರಯತ್ನ ಮಾಡಿದ್ರು ಕೂಡ ನನ್ನ ಹಿಂದಿನ ಎಲ್ಲ ಹೇಳಿಕೆಗಳಿಗೆ ನಾನು ಬದ್ಧ ಎಂದಿದ್ದಾರೆ




























