ಡಿಸಿಸಿ ಬ್ಯಾಂಕ್ ಚುನಾವಣೆ -ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ತಳ್ಳಾಟ

ಕೋಲಾರ,ಮೇ,೨೯-ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯ ೧೮ ಕ್ಷೇತ್ರಗಳಲ್ಲಿ ೧೨ ಕ್ಷೇತ್ರಗಳಿಗೆ ಬುಧವಾರ ನಡೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಮಧ್ಯೆ ಸಣ್ಣಪುಟ್ಟ ತಳ್ಳಾಟ ಹೊರತುಪಡಿಸಿ ಶಾಂತಿಯುತವಾಗಿ ಮತದಾನ ನಡೆಯಿತು.


೧೮ ಕ್ಷೇತ್ರಗಳಲ್ಲಿ ೬ ಕ್ಷೇತ್ರಗಳಿಗೆ ಅವಿರೋಧವಾಗಿ ಆಯ್ಕೆ ಆಗಿದ್ದರು. ಉಳಿದ ೧೨ ಕ್ಷೇತ್ರಗಳಿಗೆ ನಗರದ ಪ್ರಥಮದರ್ಜೆ ಕಾಲೇಜಿನಲ್ಲಿ ಮತದಾನ ನಡೆಯಿತು. ಬುಧವಾರ ಬೆಳ್ಳಗ್ಗೆ ೮ ಗಂಟೆಯಿಂದ ಪ್ರಾರಂಭವಾದ ಮತದಾನ ಪ್ರಕ್ರಿಯೆ ಸಂಜೆ ೪ ಗಂಟೆಯ ತನಕ ನಡೆಯಿತು.


ಸಹಕಾರ ಕ್ಷೇತ್ರ ಚುನಾವಣೆ ಯಾವುದೇ ರಾಜಕೀಯ ಚುನಾವಣೆಗಳಿಗಿಂತ ವಿಭಿನ್ನವಾಗಿ ಜಿದ್ದಾಜಿದ್ದಿಯಾಗಿ ನಡೆಯಿತು. ಮತದಾನ ಕೇಂದ್ರದ ಮುಂಭಾಗ ಅಭ್ಯರ್ಥಿಗಳ ಪರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್, ಬಿಜೆಪಿ ಪಕ್ಷಗಳಿಂದ ಪೆಂಡಾಲ್‌ಗಳನ್ನು ಹಾಕಿ ಕಾರ್ಯಕರ್ತರು, ಮುಖಂಡರು ಕುಳಿತು ಮತಯಾಚನೆ ಮಾಡಿದರು.


ಇವರ ಜೊತೆ ಶಾಸಕರಾದ ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಎಂ.ಎಲ್.ಸಿ.ಅನಿಲ್‌ಕುಮಾರ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಬುಧವಾರ ಬೆಳ್ಳಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆಯ ತನಕ ಪೆಂಡಾಲ್ ಕೆಳಗೆ ಕುಳಿತು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಮತದಾರರನ್ನು ಓಲೈಸುವ ಕೆಲಸ ಮಾಡುತ್ತಿದ್ದರು.


ಮಾಜಿ ಅಧ್ಯಕ್ಷ ಗೋವಿಂದಗೌಡ ಪರವಾಗಿ ಜೆಡಿಎಸ್ ಬಿಜೆಪಿ ಮುಖಂಡರು ಹಾಗೂ ಮಾಲೂರು ಶಾಸಕ ಸಮೃದ್ಧಿ ಮಂಜುನಾಥ್, ಮಾಜಿ ಸಚಿವ ವರ್ತೂರು ಪ್ರಕಾಶ್ ಸೇರಿದಂತೆ ಎರಡೂ ಪಕ್ಷದ ಕಾರ್ಯಕರ್ತರು ಮತದಾನದ ಕೇಂದ್ರದ ಮುಂದೆ ಮತಯಾಚನೆ ಮಾಡುತ್ತಿರುವುದು ಕಂಡುಬಂದಿತು.

ಮಾತಿನ ಚಕಮಕಿ ತಳ್ಳಾಟ:
ಮತದಾನ ಕೇಂದ್ರಕ್ಕೆ ಕಾಂಗ್ರೆಸ್ ಮುಖಂಡರು ಹೋಗಿದ್ದಾರೆ ಎಂದು ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಮತದಾನದ ಕೇಂದ್ರ ಮುಂಭಾಗ ಪೋಲಿಸರ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಇದರ ಪ್ರತೀಕವಾಗಿ ಸಂಸದ ಮಲ್ಲೇಶ್‌ಬಾಬು ಅವರ ಕಾರು ಮತದಾನ ಕೇಂದ್ರದ ಮುಂಭಾಗ ನಿಲ್ಲಿಸಿದ್ದಕ್ಕೆ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.ಕಾರು ತೆಗೆಸುವಂತೆ ಕಾಂಗ್ರೇಸ್ ಕಾರ್ಯಕರ್ತರು ಒತ್ತಾಯಪಡಿಸಿದರು. ಆಗ ಎರಡೂ ಗುಂಪುಗಳ ಮಧ್ಯೆ ಮಾತಿಮಾತು ಬೆಳೆದು ಕೈಕೈ ಮಿಲಾಯಿಸುವ ಹಂತವನ್ನು ಅರಿತ ಪೋಲಿಸರು ಎರಡೂ ಗುಂಪುಗಳನ್ನು ಚದುರಿಸುವ ಮೂಲಕ ಆಗುವ ಮೂಲಕ ಆಗುವ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.

ಮತದಾರರಿಗೆ ಕಾರ್ಯಕರ್ತರಿಗೆ ಬಿರಿಯಾನಿ
ಜೆಡಿಎಸ್ ಕಾರ್ಯಕರ್ತರಿಂದ ಮತದಾರರಿಗೆ ಮತ್ತು ಮುಖಂಡರಿಗೆ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ಮತ್ತು ಮುಖಂಡರಿಗೆ ಸಸ್ಯಾಹಾರಿ ಲಘು ಉಪಹಾರವನ್ನು ಏರ್ಪಡಿಸಿದ್ದರು.ಅಭ್ಯರ್ಥಿಗಳ ಪರವಾಗಿ ಮತದಾರರನ್ನು ಪ್ರವಾಸಕ್ಕೆ ಕೊಂಡೊಯ್ದಿದ್ದ ಮತದಾರರನ್ನು ಹೊತ್ತು ತಂದ ಬಸ್ಸು ಮತ್ತು ಕಾರುಗಳು ಮತದಾನ ಕೇಂದ್ರದ ಮುಂಭಾಗ ಆಗಮಿಸಿದಾಗ ಆಯಾ ಅಭ್ಯರ್ಥಿಗಳ ಪರವಾಗಿ, ಪಕ್ಷದ ಪರವಾಗಿ ಈ ಕಾರ್ಯಕರ್ತರು ಜಯಕಾರಗಳನ್ನು ಹಾಕುತ್ತಿದ್ದರು.

ಬಿಜೆಪಿ ಮಾಜಿ ಶಾಸಕ ವೈ.ಸಂಪಂಗಿ ಪ್ರತಿಕ್ರಿಯೆ :
ನನ್ನ ಮಗ ಪ್ರವೀಣ್ ಚುನಾವಣಾ ಕಣದಿಂದ ನಾಮಪತ್ರ ವಾಪಸ್ಸು ಪಡೆಯಲು ಆಮಿಷಗಳಿಗೆ ಒಳಗಾಗಿಲ್ಲ. ಹಾಗೂ ಕಾಂಗ್ರೆಸ್ ಜೊತೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಮಾಜಿ ಶಾಸಕ ವೈ.ಸಂಪಂಗಿ ಸ್ಪಷ್ಟನೆ ನೀಡಿದರು.

ನಮ್ಮದೇ ಪಕ್ಷದ ಮಾಜಿ ಸಚಿವ ವರ್ತೂರು ಪ್ರಕಾಶ್ ಚುನಾವಣೆಗೆ ಸಹಕಾರ ನೀಡಲಿಲ್ಲ. ನಾಮಪತ್ರ ಸಲ್ಲಿಕೆ ನಂತರವೂ ಮುಖಂಡರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ವರ್ತೂರು ಪ್ರಕಾಶ್, ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೊವಿಂದಗೌಡ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ರಾಜಕೀಯವಾಗಿ ನಮ್ಮನ್ನು ತುಳಿದಿದ್ದೇ ಬ್ಯಾಲಹಳ್ಳಿ ಗೋವಿಂದಗೌಡ. ನನ್ನ ಮಗನಿಗೆ ನಮ್ಮ ಪಕ್ಷದ ಮುಖಂಡರಿಂದಲೇ ಬೆಂಬಲ ಸಿಗದಂತೆ ಆಯಿತು.


ಬ್ಯಾಲಹಳ್ಳಿ ಗೋವಿಂದಗೌಡರಿಗೆ ಬೆಂಬಲ ನೀಡುವುದು ಇಷ್ಟ ಇರಲಿಲ್ಲ. ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರಕ್ಕೆ ಗೋವಿಂದಗೌಡರೇ ಕಾರಣ. ಮತಗಳ ಕ್ರೂಢೀಕರಣ ಸಾಧ್ಯವಾಗದ ಹಿನ್ನಲೆಯಲ್ಲಿ ನಾಮಪತ್ರ ವಾಪಸ್ಸು ಪಡೆದಿದ್ದೇವೆ. ಒಳಮೈತ್ರಿ ಒಳ ಒಪ್ಪಂದ ಸತ್ಯಕ್ಕೆ ದೂರವಾದದ್ದೆಂದು ವೈ.ಸಂಪಂಗಿ ತಿಳಿಸಿದ್ದಾರೆ.