
ಕಲಬುರಗಿ,ಆ.20: ಜಿಲ್ಲೆಯ ವಸತಿ ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗುವ ಊಟದ ಗುಣಮಟ್ಟ ಖಾತ್ರಿಗೆ ಶಿಕ್ಷಕರು ಮತ್ತು ಪ್ರಾಂಶುಪಾಲರು ಮಕ್ಕಳೊಂದಿಗೆ ಊಟ ಸೇವಿಸಬೇಕು. ಪ್ರತಿ ದಿನದ ಊಟಕ್ಕೆ ಸ್ವಚ್ಚ ತರಕಾರಿನೆ ಬಳಸಬೇಕು. ಶುಚಿತ್ವ ಮತ್ತು ನೈರ್ಮಲ್ಯ ವಿಷಯದಲ್ಲಿ ಯಾವುದೇ ಕಾಂಪೆÇ್ರೀಮೈಸ್ ಬೇಡ ಎಂದು ವಾರ್ಡ್‍ನ್ ಗಳಿಗೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಖಡಕ್ ಸೂಚನೆ ನೀಡಿದ್ದಾರೆ.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ವಾರ್ಡನ್ ಗಳೊಂದಿಗೆ ಸಭೆ ನಡೆಸಿದ ಅವರು, ಶಾಲೆಗೆ ಗುತ್ತಿಗೆದಾರನಿಂದ ಆಹಾರ ಧಾನ್ಯ ಸ್ವೀಕರಿಸುವಾಗ ಅದರ ಗುಣಮಟ್ಟ, ಮುಕ್ತಾಯದ ಅವಧಿ ಕಡ್ಡಾಯವಾಗಿ ಪರಿಶೀಲಿಸಬೇಕು. ಎಕ್ಸ್ ಪೈರಿ ಡೇಟ್ ಮುಗಿದಲ್ಲಿ ಅದನ್ನು ಸ್ವೀಕರಿಸಬಾರದು. ಕಳಪೆ ಆಹಾರ ಪೂರೈಕೆಯಾದಲ್ಲಿ ಕೂಡಲೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕೆಂದರು.
ಇತ್ತೀಚೆಗೆ ಜಿಲ್ಲೆಯಲ್ಲಿ ಊಟ ಸೇವನೆಯಿಂದ ಮಕ್ಕಳ ಅಸ್ವಸ್ಥರಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದು ನಿಜಕ್ಕು ಬೇಸರದ ಸಂಗತಿಯಾಗಿದೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇದು ಮರುಕಳಿಸದಂತೆ ಎಚ್ಚರ ವಹಿಸಬೇಕು. ಶಾಲಾ ಶಿಕ್ಷಕರು ಮತ್ತು ಪ್ರಾಂಶುಪಾಲರು ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟ ಮಕ್ಕಳೊಂದಿಗೆ ಸೇವಿಸಬೇಕು. ಇನ್ನು ವಾರ್ಡನ್ ದಿನದ ಮೂರು ಹೊತ್ತು ಊಟದ ಸಮಯದಲ್ಲಿ ಎದುರು ಇಂತು ಮೇಲುಸ್ತುವಾರಿ ವಹಿಸಬೇಕು ಎಂದರು.
ವಿಶೇಷವಾಗಿ ಅಕ್ಕಿ, ಗೋದಿ ಸೇರಿದಂತೆ ಆಹಾರಧಾನ್ಯ, ಅಡುಗೆ ಪದಾರ್ಥಗಳನ್ನು ಸ್ವೀಕರಿಸಿದ ಕೂಡಲೆ ಅವೆಲ್ಲಗಳನ್ನು ಸ್ವಚ್ಛಗೊಳಿಸಬೇಕು. ಕನಿಷ್ಠ 15 ದಿನಕ್ಕೊಮ್ಮೆ ಆರ್.ಓ ಪ್ಲ್ಯಾಂಟ್ ತೊಳೆಯಬೇಕು. ಅಡುಗೆ ಕೋಣೆ, ಡೈನಿಂಗ್ ಹಾಲ್, ಶೌಚಾಲಯ ಕೋಣೆ ಹೀಗೆ ಶಾಲೆಯ ಸಂಪೂರ್ಣ ಕ್ಯಾಂಪಸ್ ಸ್ವಚ್ಛತೆಯಿಂದ ಕೂಡಿರಬೇಕು. ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ವಾರ್ಡ್ ನ್‍ಗಳಿಗೆ ಡಿ.ಸಿ. ಸೂಚಿಸಿದರು.
ಇನ್ನು ಶಾಲೆಗಳಿಗೆ ಆರೋಗ್ಯ ಇಲಾಖೆಯ ಆರ್.ಬಿ.ಎಸ್.ಕೆ. ತಂಡ ನಿರಂತರ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ತುರ್ತು ಸಂದರ್ಭದಲ್ಲಿ ಅಗತ್ಯ ಔಷದೋಪಚಾರ ಶಾಲೆಯಲ್ಲಿರಬೇಕು. ನಸಿರ್ಂಗ್ ಸ್ಟಾಫ್ ಕೇಂದ್ರಸ್ಥಾನದಲ್ಲಿದ್ದು ಮಕ್ಕಳ ಆರೋಗ್ಯ ಮೇಲೆ ಗಮನ ಹರಿಸಬೇಕು ಎಂದರು.
ಮೂಲಸೌಕರ್ಯದ ಪಟ್ಟಿ ಕೊಡಿ:
ವಸತಿ ಶಾಲೆಯಲ್ಲಿ ಬೆಂಚ್, ವಿದ್ಯುತ್ ದುರಸ್ತಿ, ಕಟ್ಟಡ ದುರಸ್ತಿ, ಆರ್.ಓ. ಪ್ಲ್ಯಾಂಟ್ ಸೇರಿದಂತೆ ಶಾಲೆಗಳಿಗೆ ಬೇಕಾದ ಮೂಲ ಸೌಕರ್ಯಗಳ ಕುರಿತು ಕೂಡಲೆ ಪಟ್ಟಿ ನೀಡಿದಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿ ಅನುದಾನ ಅಥವಾ ಇಲಾಖೆಯ ಅನುದಾನದಿಂದ ಅದೆಲ್ಲವನ್ನು ಪೂರೈಸಲಾಗುವುದು ಎಂದು ಡಿ.ಸಿ ಇಕ್ರಂ ಶರೀಫ್ ತಿಳಿಸಿದರು.
ಶೇ.100ರಷ್ಟು ಫಲಿತಾಂಶ ಗುರಿ:
ಸರ್ಕಾರ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂದು ಸಾವಿರಾರು ಕೋಟಿ ರೂ. ಹಣ ಶಿಕ್ಷಣ ಕ್ಷೇತ್ರಕ್ಕೆ ಖರ್ಚು ಮಾಡುತ್ತಿದೆ. ವಿಶೇಷವಾಗಿ ಬಡ ಮಕ್ಕಳಿಗೆ ಹಳ್ಳಿಯಲ್ಲಿಯೆ ಒಳ್ಳೆಯ ಶಿಕ್ಷಣ ಸಿಗಲೆಂಬ ಆಶಾಭಾವನೆಯೊಂದಿಗೆ ವಸತಿ ಶಾಲೆಗಳನ್ನು ತೆರೆಯಲಾಗಿದೆ. ಇಷ್ಟೆಲ್ಲ ಸೌಕರ್ಯ ನೀಡಿದರೂ ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ಹೇಗೆ ಎಂದು ಪ್ರಾಂಶುಪಾಲರನ್ನು ಪ್ರಶ್ನಿಸಿದ ಡಿ.ಸಿ. ಅವರು, ಜಿಲ್ಲೆಯ ಪ್ರತಿ ವಸತಿ ಶಾಲೆ ಶೇ.100ರಷ್ಟು ಫಲಿತಾಂಶ ಪಡೆಯುವ ಗುರಿಯೊಂದಿಗೆ ಸಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ ಸಂಕನೂರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಮತ್ತು ಪ್ರಭಾರಿ ಬಿ.ಸಿ.ಎಂ. ಅಧಿಕಾರಿ ಸಂಗಮೇಶ ಸೇರಿದಂತೆ ಜಿಲ್ಲೆಯ ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಯ ಪ್ರಾಂಶುಪಾಲರು, ವಾರ್ಡನ್ ಭಾಗವಹಿಸಿದ್ದರು.

































