ರೈತರು ಸಾವಯವ ಕೃಷಿ ಅಳವಡಿಸಿಕೊಳ್ಳಲು ಡಿಸಿ ಮನವಿ

ಕರಜಗಿ :ಅ.14:ಪ್ರತಿಯೊಬ್ಬ ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಬೆಳೆಗಳನ್ನ ಬೆಳೆಯಬೇಕು ಇದರಿಂದ ಖರ್ಚು ಕಡಿಮೆ ಆದಾಯ ಹೆಚ್ಚು ಮತ್ತು ಭೂಮಿಯ ಫಲವತ್ತತೆ ಕಾಪಾಡಲು ಸಾಧ್ಯವಾಗುತ್ತದೆ.ರೈತರಿಗೆ ರಾಸಾಯನಿಕ ರಸಗೊಬ್ಬರವನ್ನು ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರ ಬಳಸುವಂತೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝೀಯಾ ತರುನ್ನುಮ್ ತಿಳಿಸಿದರು.ಅಫಜಲಪುರ ತಾಲೂಕಿನ ಅಳ್ಳಗಿ ಗ್ರಾಮದ ರೇವಣಸಿದ್ಧ ಹಾಳಕಿ ಅವರ ತೋಟದಲ್ಲಿ ಏರ್ಪಡಿಸಿರುವ ಸಾವಯವ ಕೃಷಿಯಲ್ಲಿ ಬೆಳೆದಿರುವ ಹಣ್ಣು ಹಂಪಲುಗಳ ಕಾರ್ಯಗಾರದಲ್ಲಿ ಅವರ ಮಾತನಾಡಿ,ರೇವಣಸಿದ್ಧ ಹಾಳಕಿಯವರು ಸಾವಯವ ಕೃಷಿಯಲ್ಲಿ ಒಳ್ಳೆಯ ಹಣ್ಣು ಹಂಪಲುಗಳನ್ನು ಬೆಳೆದಿದ್ದಾರೆ ಇದರಂತೆ ಎಲ್ಲ ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆಗಳನ್ನ ಬೆಳೆಯಬೇಕು ಇದರಿಂದ ಸಾಕಷ್ಟು ಅನುಕೂಲಗಳಿವೆ ಎಂದು ಅವರು ತಿಳಿಸಿದರು.

ರೈತ ರೇವಣಸಿದ್ಧ ಹಾಳಕಿ ಅವರು ಮಾತನಾಡಿ, ನೈಸರ್ಗಿಕ ಕೃಷಿ ಪದ್ಧತಿ ಎಂದರೆ ರಾಸಾಯನಿಕ ಮುಕ್ತ ಕೃಷಿ ವಿಧಾನವಾಗಿದೆ.ಇದು ಪ್ರಕೃತಿಯ ನಿಯಮಗಳನ್ನು ಆಧರಿಸಿದೆ ಮತ್ತು ಪರಿಸರ ಸ್ನೇಹಿಯಾಗಿದೆ. ಬೆಳೆಗಳು, ಜಾನುವಾರುಗಳು ಮತ್ತು ಮರಗಳನ್ನು ಒಳಗೊಂಡಿರುವ ಜೀವವೈವಿಧ್ಯತೆಯನ್ನು ಇದು ಉತ್ತೇಜಿಸುತ್ತದೆ. ಜಮೀನಿನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ, ರೈತರು ಕೃಷಿ ವೆಚ್ಚವನ್ನು ಕಡಿಮೆ ಮಾಡಬಹುದು ಮತ್ತು ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂದು ಎಂದು ತಿಳಿಸಿದರು.ನೈಸರ್ಗಿಕ ಕೃಷಿಯಲ್ಲಿ ಯಾವುದೇ ಕೃತಕ ರಸಗೊಬ್ಬರಗಳು ಅಥವಾ ಕೀಟನಾಶಕಗಳನ್ನು ಬಳಸುವುದಿಲ್ಲ.ಇದು ಬೆಳೆಗಳು, ಮರಗಳು ಮತ್ತು ಜಾನುವಾರುಗಳನ್ನು ಒಳಗೊಂಡಂತೆ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳನ್ನು ಒಳಗೊಂಡಿದೆ.ನೈಸರ್ಗಿಕ ಕೃಷಿಯಲ್ಲಿ, ರೈತರು ಜಮೀನಿನಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸುತ್ತಾರೆ, ಉದಾಹರಣೆಗೆ ಹಸುವಿನ ಸಗಣಿ ಮತ್ತು ಮೂತ್ರ, ಬೆಳೆ ಉಳಿಕೆಗಳು, ಇತ್ಯಾದಿ.ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಮತ್ತು ಫಲವತ್ತತೆಯನ್ನು ಕಾಪಾಡಿಕೊಳ್ಳಲು ಇದು ಗಮನ ಹರಿಸುತ್ತದೆ ರಾಸಾಯನಿಕ ವಸ್ತುಗಳನ್ನು ಖರೀದಿಸುವ ಅಗತ್ಯವಿಲ್ಲದ ಕಾರಣ ರೈತರಿಗೆ ಕೃಷಿ ವೆಚ್ಚ ಕಡಿಮೆಯಾಗುತ್ತದೆ.ನೈಸರ್ಗಿಕ ಕೃಷಿಯ ಮೂಲಕ ಬೆಳೆದ ಉತ್ಪನ್ನಗಳು ಉತ್ತಮ ಗುಣಮಟ್ಟದ ಮತ್ತು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತವೆ,ಇದು ರೈತರಿಗೆ ಹೆಚ್ಚಿನ ಆದಾಯವನ್ನು ತರುತ್ತದೆ.ನೈಸರ್ಗಿಕ ಕೃಷಿ ಪರಿಸರಕ್ಕೆ ಹಾನಿಕಾರಕವಲ್ಲ ಮತ್ತು ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.ನೈಸರ್ಗಿಕ ಕೃಷಿ ಪದ್ಧತಿಯು ಭಾರತದಲ್ಲಿ ಬಹಳ ಜನಪ್ರಿಯವಾಗುತ್ತಿದೆ, ಏಕೆಂದರೆ ಇದು ರೈತರಿಗೆ ಆರ್ಥಿಕ ಮತ್ತು ಪರಿಸರ ಪ್ರಯೋಜನಗಳನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಶಿವು ಬೆಳಗುಂಪಿ, ಶಂಕರ ರೂಮ್ಗೋಳ, ಅಣ್ಣಾರಾಯ ಪಟ್ಟೆದಾರ, ಬಾಬು ರಾಜ,ಸಾವಯವ ಕೃಷಿ ತಜ್ಞ ಹನುಮಂತಪ್ಪ ಬೆಳಗುಂಪಿ, ಹಾಗೂ ಜಂಟಿ ಕೃಷಿ ನಿರ್ದೇಶಕ ಸಮ್ಮದ್ ಪಟೇಲ್,ತೋಟಗಾರಿಕೆ ಉಪ ನಿರ್ದೇಶಕ ಸಂತೋಷ್ ಇನಾಮ್ದಾರ್ ,ಪಶು ಸಂಗೋಪನೆಯ ಉಪನಿರ್ದೇಶಕ ಸಂಜಯ ರೆಡ್ಡಿ,ತಹಶೀಲ್ದಾರ ಸಂಜೀರಕುಮಾರ ದಾಸರ,ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್. ಗಡಿಗಿಮನಿ,ತೋಟಗಾರಿಕೆಯ ಸಹಾಯಕ ನಿರ್ದೇಶಕ ಶಂಕರಗೌಡ ಪಾಟೀಲ್,ಪಶು ಸಂಗೋಪನೆ ಸಹಾಯಕ ನಿರ್ದೇಶಕ ಕೆ.ಎಂ.ಕೋಟೆ ಇತರರಿದ್ದರು.

ವಿವಿಧಡೆ ಭೇಟಿ ಪರಿಶೀಲನೆ: ಜಿಲ್ಲಾಧಿಕಾರಿಗಳು ತಾಲೂಕಿನ ಗೊಬ್ಬುರ್ ಕೆ ಗ್ರಾಮದಲ್ಲಿ ರೈತ ಬೆಳೆದಿರುವ ಡ್ರೇಗನ್ ಹಣ್ಣನ್ನ ಪರಿಶೀಲಿಸಿದರು ನಂತರ ಚೌಡಾಪೂರದಲ್ಲಿ ಕೃಷಿ ಇಲಾಖೆಯ ಮುಖಾಂತರ ಪಡೆದಿರುವ ಸಹಾಯಧನದ ಬೇಳೆ ಕಾರ್ಖಾನೆಯನ್ನು ಮತ್ತು ಉಡಚಣ ಹಟ್ಟಿಯಲ್ಲಿನ ಕುರಿ ಸಾಕಾಣಿಕೆ ಮತ್ತು ಅಳ್ಳಗಿ ಬಿ ಗ್ರಾಮದ ಅರವಿಂದ ಹಾಳಕಿ ಅವರ ತೋಟದಲ್ಲಿ ಕೃಷಿ ಹೊಂಡಗಳನ್ನು ಪರಿಶೀಲಿಸಿದರು