ರೈತರ ಕಂದಾಯ ಭೂಮಿಯನ್ನು ಅರಣ್ಯ ಎಂದು ಇಂಡಿಕರಿಸದಿರಲು ಡಿಸಿ ಮನವಿ

ಕೋಲಾರ,ಜ.೨೦- ಇಂದು ಭೂ ಸಂತ್ರಸ್ತರ ಹೋರಾಟ ಸಮಿತಿಯು ಜಿಲ್ಲಾಧಿಕಾರಿಗಳನ್ನು ತಮ್ಮ ಕಚೇರಿಯಲ್ಲಿ ಭೇಟಿ ಮಾಡಿ ಕಂದಾಯ ಭೂಮಿಗಳನ್ನು ರೈತರಿಗೆ ನೀಡಿದ್ದು ಅದರಲ್ಲಿ ಯಾವುದೇ ಕಾರಣಕ್ಕೆ ಅರಣ್ಯ ಎಂದು ಪಹಣಿ ಕಾಲಂ ೯ರಲ್ಲಿ ಇಂಡಿಕರಿಸದಿರಲು ಮನವಿ ಮಾಡಿಕೊಳ್ಳಲಾಯಿತು.


ಅರಣ್ಯ ಇಲಾಖೆಯವರು ಅನಾವಶ್ಯಕವಾಗಿ ಸ್ವತಂತ್ರ ಪೂರ್ವದಲ್ಲಿ ಕೆಲವು ಅಧಿಸೂಚನೆಗಳು ಅಂದಿನ ಜಿಲ್ಲಾಧಿಕಾರಿಗಳು ಮಾಡಿದ್ದು ಅವುಗಳು ಮೂರು ವರ್ಷ ಮತ್ತು ೫ ವರ್ಷಕ್ಕೆ ಮಾತ್ರ ಸೀಮಿತ ಗೊಂಡಿರುತ್ತವೆ ಕಿರು ಅರಣ್ಯ ಮತ್ತು ಗ್ರಾಮ ಅರಣ್ಯ ಕಾಲಕ್ರಮೇಣ ಆಹಾರ ಅಭಾವದಿಂದ ಅಂದಿನ ಮೈಸೂರು ಮಹಾರಾಜರು ಇಂತಹ ಭೂಮಿಗಳನ್ನು ರೈತರಿಗೆ ನೀಡಿ ಹೆಚ್ಚು ಬೆಳೆಗಳನ್ನ ಬೆಳೆಯಲು ಪ್ರೋತ್ಸಾಹಿಸಿರುತ್ತಾರೆ.


ಈ ಸಲುವಾಗಿ ರೈತರು ಅಂದಿನಿಂದ ಇಂದಿನವರೆಗೆ ಸರ್ಕಾರದ ಆದೇಶಗಳು ಸುತ್ತೋಲೆಗಳುಗಳಂತೆ ಕಾನೂನು ಬದ್ಧವಾಗಿ ರೈತರು ನೆಮ್ಮದಿಯಿಂದ ಜೀವನೋಪಾಯ ಮಾಡುತ್ತಿರುತ್ತಾರೆ. ಇತ್ತೀಚಿಗೆ ಅರಣ್ಯ ಇಲಾಖೆಯವರು ಇಂತಹ ಅಧಿಸೂಚನೆಗಳನ್ನು ಇಟ್ಟುಕೊಂಡು ಪೊಲೀಸರ ಸಹಯೋಗದಲ್ಲಿ ರೈತರ ಜಮೀನುಗಳ ಮೇಲೆ ಅತಿಕ್ರಮಣ ಅಧಿಕಾರದ ದುರುಪಯೋಗ ದೌರ್ಜನ್ಯದಿಂದ ತಮ್ಮದೇ ದಾಟಿಯಲ್ಲಿ ರೈತರನ್ನು ಒಕ್ಕಲಿಬ್ಬಿಸಿ ಬೆದರಿಸುವುದು ಹಾಗೆಯೇ ಕಂದಾಯ ಇಲಾಖೆಗಳಲ್ಲಿ ಕೆಲವು ಆದೇಶಗಳನ್ನು ಮರೆಮಾಚಿ ರೈತರ ಪಹಣಿಗಳಲ್ಲಿ ಅರಣ್ಯ ಎಂದು ನಮೂದಿಸಲು ಹೊರಟಿದ್ದಾರೆ ತಾವುಗಳು ರೈತರ ಜೀವನೋಪಾಯಕ್ಕೆ ನೀಡಿದಂತ ಭೂಮಿಗಳನ್ನು ಯಾವುದೇ ಕಾರಣಕ್ಕೂ ಪಹಣಿ ೯ರಲ್ಲಿ ಇಂಡಿಕರಿಸಲು ಅವಕಾಶ ನೀಡಬಾರದು ಎಂದು ಮನವಿಯನ್ನು ನೀಡಲಾಯಿತು.


ಮನವಿ ಆಲಿಸಿದ ಜಿಲ್ಲಾಧಿಕಾರಿಗಳು ಈ ತಕ್ಷಣವೇ ಅಪಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಜಿಲ್ಲೆಯ ಎಲ್ಲಾ ತಹಸಿಲ್ದಾರರಿಗೂ ಅರಣ್ಯ ಇಲಾಖೆಯಿಂದ ಬಂದಂತ ಪತ್ರಗಳನ್ನು ನನ್ನ ಗಮನಕ್ಕೆ ಬಾರದೆ ಅರಣ್ಯವೆಂದು ಇಂಡಿಕರಿಸಬಾರದು ಎಂಬ ಆದೇಶವನ್ನು ಈ ತಕ್ಷಣ ಹೊರಡಿಸಲು ಸೂಚಿಸಿದರು. ಸರ್ಕಾರ ಯಾವುದೇ ರೈತರಿಗೆ ತೊಂದರೆ ನೀಡಬಾರದು ಎಂಬ ಆದೇಶವನ್ನು ನೀಡಿದ್ದು ಅದರಂತೆ ಈಗಾಗಲೇ ಅರಣ್ಯ ಇಲಾಖೆಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ರೈತರು ಹೀಗಿರುವಂತೆ ತಮ್ಮ ಜಮೀನುಗಳಲ್ಲಿ ತಾವು ಯಥಾಸ್ಥಿತಿ ಇರಬಹುದಾಗಿದೆ ಎಂದರು.


ನಿಯೋಗದಲ್ಲಿ ಭೂ ಸಂತ್ರಸ್ತರ ಹೋರಾಟ ಸಮಿತಿಯ ಸಂಚಾಲಕರಾದ ಆರ್. ಶ್ರೀನಿವಾಸನ್, ಟಿ.ಎಂ ವೆಂಕಟೇಶ್, ಗೋವಿಂದಪ್ಪ, ಹರಟಿ ಪ್ರಕಾಶ್, ಯಡಳ್ಳಿ ಮಂಜುನಾಥ, ವೆಂಕಟರಮಣಪ್ಪ, ಕಮಾರ್ ಅರಳ್ಳಿ, ಲೋಕೇಶ್, ಮಂಜುನಾಥ್, ರೈತರು ಉಪಸ್ಥಿತರಿದ್ದರು.